ಕರ್ನಾಟಕ

karnataka

By

Published : May 21, 2021, 7:52 AM IST

ETV Bharat / state

ನಿಗದಿಗಿಂತ ಹೆಚ್ಚಿನ ಬೆಲೆಗೆ ತರಕಾರಿ ಮಾರಾಟ ಮಾಡಿದರೆ ಕಠಿಣ ಕ್ರಮ: ಡಿಸಿ ಎಚ್ಚರಿಕೆ

ಅತಿ ಹೆಚ್ಚಿನ ಬೆಲೆಗೆ ತರಕಾರಿ ಮಾರಾಟ ಮಾಡುವ ಪ್ರಕರಣಗಳನ್ನು ಪತ್ತೆ ಹಚ್ಚಲು ಸಾರ್ವಜನಿಕರಿಗೆ ಟೊಲ್ ಫ್ರೀ ನಂಬರ್ ನೀಡಲಾಗುವುದು. ಜಿಲ್ಲೆಯ ನಾಗರಿಕರಿಗೆ ಈ ಸಮಯದಲ್ಲಿ ತರಕಾರಿ ಲಭಿಸಬೇಕು ಹಾಗೂ ಬೆಳಗಾರರಿಗೆ ತರಕಾರಿ ಮಾರಾಟವಾಗಬೇಕು. ಅದಕ್ಕಾಗಿ ಜಿಲ್ಲಾಡಳಿತದಿಂದ ಅಗತ್ಯ ವ್ಯವಸ್ಥೆ ಕಲ್ಪಿಸಿ ಕೊಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ನಿಗದಿಗಿಂತ ಹೆಚ್ಚಿನ ಬೆಲೆ ತರಕಾರಿ ಮಾರಾಟ ಮಾಡಿದರೆ ಕಠಿಣ ಕ್ರಮ
ನಿಗದಿಗಿಂತ ಹೆಚ್ಚಿನ ಬೆಲೆ ತರಕಾರಿ ಮಾರಾಟ ಮಾಡಿದರೆ ಕಠಿಣ ಕ್ರಮ

ರಾಯಚೂರು: ಕೊರೊನಾ ನಿಯಂತ್ರಣಕ್ಕೆ ಜಿಲ್ಲೆಯಲ್ಲಿ ಲಾಕ್ ಡೌನ್ ಜಾರಿ ಮಾಡಲಾಗಿದ್ದು, ಜೀವನಾವಶ್ಯಕ ವಸ್ತುವಾದ ತರಕಾರಿಗಳನ್ನು ದುಪ್ಪಟ್ಟು ಬೆಲೆಗೆ ಮಾರುವುದು ಅಪರಾಧ. ಹೀಗೆ ತರಕಾರಿ ಮಾರಾಟ ಮಾಡುವುದು ಕಂಡುಬಂದಲ್ಲಿ ಸಂಬಂಧಿಸಿದವರನ್ನು ಬಂಧಿಸಲಾಗುವುದು ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ದಿನೇ ದಿನೇ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರು ಹೆಚ್ಚಾಗುತ್ತಿದ್ದಾರೆ. ಅದನ್ನು ತಡೆಗಟ್ಟಲು ಜಿಲ್ಲೆಯಲ್ಲಿ ಈಗಾಗಲೇ ಸಂಪೂರ್ಣ ಲಾಕೌಡೌನ್ ಹೇರಲಾಗಿದ್ದು, ಅಗತ್ಯ ವಸ್ತುಗಳನ್ನು ಖರೀದಿಸಲು ಜಿಲ್ಲಾಡಳಿತ ದಿಂದ ಮೂರು ದಿನಕ್ಕೊಮ್ಮೆ ಅವಕಾಶ ಮಾಡಿಕೊಡಲಾಗಿದೆ. ಈ ಅವಕಾಶವನ್ನು ಬಳಸಿಕೊಂಡು ಸಾರ್ವಜನಿಕರಿಗೆ ಹೆಚ್ಚಿನ ದರದಲ್ಲಿ ತರಕಾರಿ ಮಾರಾಟ ಮಾಡುವುದು ಕಂಡುಬಂದಲ್ಲಿ ಸಂಬಂಧಿಸಿದವರನ್ನು ಬಂಧಿಸಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದರು.

ಹೊರಗಿನಿಂದ ಬಂದ ತರಕಾರಿಗಳು ಅಧಿಕ ಬೆಲೆಗೆ ಮಾರಾಟ ಮಾಡುವುದು ಕಂಡುಬಂದಲ್ಲಿ ಸಂಬಂಧಿಸಿದ ಸಂಘ-ಸಂಸ್ಥೆಯವರು ಅದನ್ನು ತಡೆಹಿಡಿಯಬೇಕು, ಹಾಗೂ ಜಿಲ್ಲಾಧಿಕಾರಿಗಳ ಕಚೇರಿಗೆ ಮಾಹಿತಿ ನೀಡಬೇಕು. ಜಿಲ್ಲೆಯ ರಿಟೇಲ್ ಹಾಗೂ ಹೋಲ್ ಸೇಲ್ ವ್ಯಾಪಾರಿಗಳು ಈ ಸಂದರ್ಭದಲ್ಲಿ ತಮ್ಮ ಜವಾಬ್ದಾರಿಯನ್ನು ನಿಭಾಯಿಸಬೇಕಿದೆ. ಯಾವುದೇ ತರಕಾರಿಯನ್ನು ಅಧಿಕ ಬೆಲೆಗೆ ಮಾರಾಟ ಮಾಡದೆ ಜಿಲ್ಲಾಡಳಿತ ನಿಗದಿಪಡಿಸಿದ ದರಕ್ಕೆ ಅನುಗುಣವಾಗಿ ಮಾರಾಟ ಮಾಡುವ, ಮೂಲಕ ಜಿಲ್ಲಾಡಳಿತದ ಜೊತೆ ಕೈಜೋಡಿಸಿ ಲಾಕ್‌ಡೌನ್ ಸಂಕಷ್ಟದಲ್ಲಿ ಸಾರ್ವಜನಿಕರ ನೆರವಿಗೆ ನಿಲ್ಲುವಂತೆ ಹೋಲ್‌ಸೇಲ್ ಹಾಗೂ ರಿಟೇಲ್ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಮನವಿ ಮಾಡಿದರು.

ಸಭೆಯಲ್ಲಿ ಜಿಲ್ಲಾ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಅಹ್ಮದ್ ಅಲಿ, ಹಾಫ್ ಕಾಮ್ಸ ಜಿಲ್ಲಾಧ್ಯಕ್ಷ ನಾಗನಗೌಡ, ತಹಶೀಲ್ದಾರ್ ಡಾ. ಹಂಪಣ್ಣ ಸಜ್ಜನ್, ನಗರಸಭೆ ಪೌರಾಯುಕ್ತ ವೆಂಕಟೇಶ್, ತರಕಾರಿ ಸಗಟು ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಮಹಮ್ಮದ್ ಇಕ್ಬಾಲ್, ಕಾರ್ಯದರ್ಶಿ ನಾಗರಾಜ್, ಹಣ್ಣು ಸಗಟು ಮಾರಾಟಗಾರ ಅಫ್ಸರ್, ಸಗಟು ಕಿರಾಣ ಮಾರಾಟಗಾರ ಸಂಘದ ಅಧ್ಯಕ್ಷ ದೇವಲಪಲ್ಲಿ ವೆಂಕಣ್ಣ ಸೇರಿದಂತೆ ಹೋಲ್‌ಸೇಲ್ ಹಾಗೂ ರಿಟೇಲ್ ಸಂಘಗಳ ಪದಾಧಿಕಾರಿಗಳು ಸೇರಿದಂತೆ ಇತರರಿದ್ದರು.

For All Latest Updates

TAGGED:

Av

ABOUT THE AUTHOR

...view details