ರಾಯಚೂರು: ದಸರಾ ಹಬ್ಬದ ಅಂಗವಾಗಿ ಶ್ರೀ ಮಂತ್ರಾಲಯ ಮಠದಲ್ಲಿ ಇಂದು ವಿಶೇಷ ಪೂಜೆ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಶ್ರೀ ರಾಯರು ಸ್ಥಾಪಿಸಿದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಶ್ರೀಮಠದ ಸುಭುದೇಂದ್ರ ತೀರ್ಥ ಪಾದಂಗಳರು ಭೇಟಿ ನೀಡಿ ವಿವಿಧ ಧಾರ್ಮಿಕ ಕಾರ್ಯಕ್ರಮ ವಿಧಿ ವಿಧಾನ ನೆರವೇರಿಸಿದರು. ಬಳಿಕ ಶ್ರೀ ಮಠದಲ್ಲಿ ಶಮಿ ವೃಕ್ಷಕ್ಕೆ ಪೂಜೆ ನೆರವೇರಿಸಲಾಯಿತು.
ರಾಯಚೂರಿನಲ್ಲಿ ಸಾಮೂಹಿಕವಾಗಿ ದಸರಾ ಹಬ್ಬ ಆಚರಣೆ ಇನ್ನೂ ನಗರದ ಮಾಣಿಕ್ ಪ್ರಭು ದೇವಸ್ಥಾನದ ಬನ್ನಿ ಕಟ್ಟೆಯ ಬಳಿ ಮಕ್ಕಳು, ಮಹಿಳೆಯರು, ವೃದ್ಧರು ಎಲ್ಲರೂ ಆಗಮಿಸಿ ದೇವಿಗೆ ಸಾಮೂಹಿಕವಾಗಿ ಪೂಜೆ ಸಲ್ಲಿಸಿ ಪರಸ್ಪರ ಬನ್ನಿ ಹಂಚಿಕೊಂಡು ಸಂಭ್ರಮದಿಂದ ದಸರಾ ಹಬ್ಬ ಆಚರಿಸಿದರು. ಇದಕ್ಕೂ ಮೊದಲು ನಗರಸಭೆಯಿಂದ ಮಾಣಿಕ್ ಪ್ರಭು ದೇವಸ್ಥಾನದ ಬನ್ನಿ ಕಟ್ಟೆಯವರೆಗೆ ನಾಡದೇವಿಯ ಭಾವಚಿತ್ರ ಮೆರವಣಿಗೆ ಹಾಗೂ ಕಲಾ ತಂಡಗಳ ಪ್ರದರ್ಶನ ಅದ್ಧೂರಿಯಾಗಿ ನಡೆದಿದ್ದು, ಆ ನಂತರ ಹಬ್ಬವನ್ನು ಆಚರಿಸಲಾಯಿತು.
ಪ್ರತೀ ವರ್ಷ ಸಾಮೂಹಿಕವಾಗಿ ದಸರಾ ಹಬ್ಬ ಆಚರಣೆ ಮಾಡಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಬನ್ನಿ ಕಟ್ಟೆಯ ರಸ್ತೆಯಲ್ಲಿ ಝಗಮಗಿಸುವ ಲೈಟಿಂಗ್ ಹಾಕಿ ಹಬ್ಬಕ್ಕೆ ಮತ್ತಷ್ಟು ಮೆರಗು ನೀಡಲಾಯಿತು.