ರಾಯಚೂರು/ಗಂಗಾವತಿ/ಹೊಸಪೇಟೆ:ಇಂದು ಬಿಡುಗಡೆಯಾಗಿರುವ ನಟ ದರ್ಶನ ಅಭಿನಯದ ರಾಬರ್ಟ್ ಸಿನೆಮಾಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಹಲವೆಡೆ ಡಿ ಬಾಸ್ ಅಭಿಮಾನಿಗಳು ಸಂಭ್ರಮಾಚರಿಸುತ್ತಿದ್ದಾರೆ.
ರಾಯಚೂರಿನಲ್ಲಿ ಬೆಳಗ್ಗೆಯೇ ಡಿ ಬಾಸ್ ಫ್ಯಾನ್ಸ್ ಚಿತ್ರಮಂದಿರಕ್ಕೆ ಬಂದು ದರ್ಶನ್ ಪರ ಘೋಷಣೆ ಹಾಕಿ, ರಾಬರ್ಟ್ ಚಿತ್ರದ ಪೋಸ್ಟ್ರ್ಗೆ ಹಾಲಿನ ಅಭಿಷೇಕ ಮಾಡಿದ್ದಾರೆ. ಟಿಕೆಟ್ ಖರೀದಿಸಲು ಸಾಲಿನಲ್ಲಿ ನಿಂತಿದ್ದು, ಹಲವರು ಮುಗಿಬಿದ್ದ ವೇಳೆ ನೂಕುನುಗ್ಗಲು ಉಂಟಾಯಿತು. ಬಳಿಕ ಪರಿಸ್ಥಿತಿ ನಿಭಾಯಿಸಲಾಯಿತು. ಬೆಳಗ್ಗೆಯಿಂದಲೇ ಆರಂಭವಾಗಿರುವ ಶೋಗೆ ಉತ್ತಮ ರೆಸ್ಪಾನ್ಸ್ ಸಹ ಸಿಕ್ಕಿದೆ.
ದರ್ಶನ್ ಅಭಿಮಾನಿಗಳ ಸಂಭ್ರಮಾಚರಣೆ ಗಂಗಾವತಿಯ ಚಂದ್ರಹಾಸ ಹಾಗೂ ಎಚ್.ಎಂ.ಎಸ್. ಎರಡು ಚಿತ್ರಮಂದಿರದಲ್ಲಿ ಚಿತ್ರ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ನಿಗದಿಯಂತೆ ಬೆಳಗ್ಗೆ ಆರು ಗಂಟೆಗೆ ಪ್ರದರ್ಶನ ಆರಂಭವಾಗಬೇಕಿತ್ತು. ಆದರೆ, ನಿರ್ಮಾಪಕರು ಹಾಗೂ ಚಿತ್ರತಂಡ ತಾಂತ್ರಿಕ ಸಮಸ್ಯೆಯಿಂದಾಗಿ ಬೆಳಗ್ಗೆ ಆರು ಗಂಟೆಯ ಬದಲಿಗೆ ಎಂಟು ಗಂಟೆಗೆ ಪ್ರದರ್ಶನ ಮಾಡುವಂತೆ ಸೂಚನೆ ನೀಡಿದ್ದರು ಎನ್ನಲಾಗಿದೆ.
ಆದರೆ, ಚಿತ್ರಮಂದಿರದ ಮುಂದೆ ನಿಂತಿದ್ದ ಅಭಿಮಾನಿಗಳು ತಕ್ಷಣವೇ ಚಿತ್ರ ಪ್ರದರ್ಶನ ಆರಂಭಿಸುವಂತೆ ಒತ್ತಾಯಿಸಿ ಚಿತ್ರ ಮಂದಿರದ ಗೇಟ್ ಮುರಿಯಲು ಯತ್ನಿಸಿರುವ ಘಟನೆ ನಡೆಯಿತು. ರಾತ್ರಿ ಹನ್ನೆರಡು ಗಂಟೆಯಿಂದಲೇ ಅಭಿಮಾನಿಗಳು ಚಿತ್ರ ವೀಕ್ಷಣೆಗೆ ನೆರೆದಿದ್ದರು. ಸಹನೆ ಕಳೆದುಕೊಂಡ ಅಭಿಮಾನಿಗಳು ದಾಂಧಲೆಗೆ ಮುಂದಾದರು.
ಇನ್ನೂ ಹೊಸಪೇಟೆಯಲ್ಲಿ ರಾಬರ್ಟ್ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಗರದ ಸರಸ್ವತಿ ಮತ್ತು ಲಕ್ಷ್ಮಿ ಎರಡು ಚಿತ್ರಮಂದಿರಗಳಲ್ಲಿ ರಾಬರ್ಟ್ ಚಿತ್ರವನ್ನು ಬಿಡುಗಡೆ ಮಾಡಲಾಗಿದೆ. ಮೊದಲ ಶೋ ಗೆ ಎರಡು ಚಿತ್ರ ಮಂದಿರಗಳು ಹೌಸ್ ಪುಲ್ ಆಗಿವೆ. ಕೊರೊನಾ ಬಂದ ನಂತರ ಚಿತ್ರಮಂದಿರ ತೆರೆಯಲು ಸರ್ಕಾರ ಅವಕಾಶ ನೀಡಿರಲಿಲ್ಲ. ಈಗ ನಿಯಮಗಳನ್ನು ಸಡಿಲಗೊಳಿಸಿ ಚಿತ್ರಮಂದಿರ ತೆರೆಯಲು ಅವಕಾಶ ನೀಡಿದೆ. ಹಲವು ತಿಂಗಳ ಬಳಿಕ ದರ್ಶನ್ ಅವರ ಮೊದಲ ಚಿತ್ರ ರಾಬರ್ಟ್ ಚಿತ್ರ ಬಿಡುಗಡೆ ಆಗಿದ್ದು, ಜನರು ಭರ್ಜರಿ ಸ್ವಾಗತ ನೀಡಿದ್ದಾರೆ.
ಇದನ್ನೂ ಓದಿ:'ರಾಬರ್ಟ್' ಹವಾ: ಶಿವಮೊಗ್ಗದಲ್ಲಿ ಡಿ ಬಾಸ್ ಅಭಿಮಾನಿಗಳ ಸಂಭ್ರಮ
ಬೆಳಗ್ಗೆಯಿಂದ ಕಾದು ಕುಳಿತ ಅಭಿಮಾನಿಗಳು: ಬೆಳಗಿನ ಜಾವ ಚಿತ್ರವನ್ನು ವೀಕ್ಷಿಸಲು ಅಭಿಮಾನಿಗಳು ಜಮಾವಣೆಗೊಂಡಿದ್ದರು. ಟಿಕೆಟ್ ಪಡೆಯಲು ಅಭಿಮಾನಿಗಳು ಮುಗಿಬಿದ್ದದ್ದರು. ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.