ನಿವೃತ್ತ ನ್ಯಾಯಮೂರ್ತಿ ಡಾ ಶಿವರಾಜ್ ಪಾಟೀಲ್ ಪ್ರತಿಕ್ರಿಯೆ ರಾಯಚೂರು: ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದ ವಿಚಾರಕ್ಕೆ ಎರಡು ರಾಜ್ಯದ ಜನರು ಸಾರ್ವಜನಿಕರ ಆಸ್ತಿ ನಷ್ಟ ಮಾಡುವಂತಹ ಹಾಗೂ ಮಸಿ ಬಳಿಯುವಂತಹ ಕೆಲಸ ಮಾಡಬಾರದು ಎಂದು ಕರ್ನಾಟಕ ಗಡಿ ಮತ್ತು ನದಿಗಳ ರಕ್ಷಣಾ ಸಮಿತಿ ಅಧ್ಯಕ್ಷ ಹಾಗೂ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಡಾ.ಶಿವರಾಜ್ ಪಾಟೀಲ್ ಹೇಳಿದ್ದಾರೆ.
ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆಸ್ತಿ ಹಾನಿ, ಮಸಿ ಬಳಿಯವುದು ಯಾವುದೇ ಸಮಸ್ಯೆಗೆ ಪರಿಹಾರ ಅಲ್ಲ. ಯಾರೇ ಈ ರೀತಿಯಾಗಿ ಮಾಡಿದರೂ ಅದು ತಪ್ಪು. ಗಡಿ ವಿಚಾರದಲ್ಲಿ ನಮ್ಮ ರಾಜ್ಯದ ನಿಲುವು ನಿಖರವಾಗಿದೆ. ಅದರಲ್ಲಿ ಯಾವುದೇ ಅನುಮಾನವಿಲ್ಲ. ಅಸೆಂಬ್ಲಿಯಲ್ಲಿ ಈ ಬಗ್ಗೆ ಸಾಕಷ್ಟು ಬಾರಿ ಚರ್ಚೆಯಾಗಿದೆ. ಮಹಾಜನ್ ವರದಿ ಅಂತಿಮ ಎಂಬುದು ತೀರ್ಮಾನ ಆಗಿದೆ ಎಂದರು.
ಮಹಾಜನ್ ವರದಿಯೇ ನಮ್ಮ ನಿಲುವು. ಅದರಲ್ಲಿ ವ್ಯತ್ಯಾಸ ಇಲ್ಲ. ಎರಡು ರಾಜ್ಯದ ಮುಖ್ಯಮಂತ್ರಿಗಳ ಜೊತೆ ಹೈಕಮಾಂಡ್ ಚರ್ಚೆ, ಮುಖ್ಯಮಂತ್ರಿ ನಡುವಿನ ಚರ್ಚೆ ಬಗ್ಗೆ ನಾನು ಮಾತನಾಡಲ್ಲ. ಅದು ರಾಜಕೀಯಕ್ಕೆ ಸಂಬಂಧಿಸಿದ ವಿಚಾರವಾಗಿದೆ. ಗೃಹ ಸಚಿವರ ಜೊತೆ ಚರ್ಚೆ ಮಾಡಿದರೆ, ಎರಡೂ ರಾಜ್ಯಕ್ಕೆ ಒಳ್ಳೆಯದು. ಆದರೆ ನಮ್ಮ ಗಡಿ ಮತ್ತು ನಮ್ಮ ನದಿಗಳಿಗೆ ಧಕ್ಕೆ ಆಗದಿದ್ದರೆ ಒಳ್ಳೆಯದು ಎಂದು ಹೇಳಿದರು.
ಗಡಿಯಲ್ಲಿರುವ ಹಳ್ಳಿಗಳ ರಾಜ್ಯಕ್ಕೆ ಸೇರ್ಪಡೆ ವಿಚಾರದಲ್ಲಿ ಎರಡೂ ರೀತಿಯ ಗೊಂದಲವಿದೆ. ಅವರ ಕೆಲ ಹಳ್ಳಿಗಳು ನಮ್ಮ ರಾಜ್ಯಕ್ಕೆ ಸೇರಬೇಕು ಅಂತಾರೆ. ನಮ್ಮ ರಾಜ್ಯದ ಕೆಲ ಹಳ್ಳಿಗಳು ಅವರಿಗೆ ಸೇರಬೇಕು ಅಂತಾರೆ. 6 ದಶಕಗಳ ಬಳಿಕ ಈ ವಿವಾದ ಎಷ್ಟರಮಟ್ಟಿಗೆ ಸರಿ? ಜನರು ಸೆಟಲ್ ಆಗಿದ್ದಾರೆ. ಭಾವನಾತ್ಮಕವಾಗಿ ಹೊಂದಾಣಿಕೆ ಆಗಿದ್ದಾರೆ. ಇವಾಗ ಹಳ್ಳಿಗಳನ್ನು ಹೆಚ್ಚು ಕಡಿಮೆ ಮಾಡಿ ಎಂದರೆ ಕಷ್ಟ ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ:ಗಡಿ ವಿವಾದ: ಅಮಿತ್ ಶಾಗೆ ಸಿಎಂ ಬೊಮ್ಮಾಯಿ ಫೋನ್, ದೆಹಲಿ ಭೇಟಿ ಮುನ್ನ ಸರ್ವಪಕ್ಷ ಸಭೆ