ರಾಯಚೂರು: ಕೃಷ್ಣಾ ನದಿಯ ಪ್ರವಾಹದಿಂದಾಗಿ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಬೆಳೆ ಹಾನಿಯಾಗಿದ್ದು, ಅನ್ನದಾತರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಉಕ್ಕಿದ ಕೃಷ್ಣೆ... ಮುಳುಗಿದ ಸಾವಿರಾರು ಎಕರೆ ಬೆಳೆ... ರೈತನ ಗೋಳು ಕೇಳೋರ್ಯಾರು?
ಕೃಷ್ಣಾ ಹಾಗೂ ತುಂಗಭದ್ರಾ ನದಿಯ ಪ್ರವಾಹದಿಂದ ನದಿ ದಂಡೆಯ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಬೆಳೆ ನೆಲಕಚ್ಚಿದೆ. ಇದರಿಂದ ಭಾರಿ ನಷ್ಟ ಉಂಟಾಗಿದ್ದು, ರೈತರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಜಿಲ್ಲೆಯಲ್ಲಿ ಕಳೆದ 3-4 ವರ್ಷಗಳಿಂದ ಸಮರ್ಪಕವಾಗಿ ಮಳೆ ಸುರಿಯದೆ ಬರಗಾಲ ಆವರಿಸಿತ್ತು. ಆದ್ರೆ ಈಗ ಜಿಲ್ಲೆಗೆ ಅಪ್ಪಳಿಸಿದ ಪ್ರವಾಹದಿಂದ ರೈತ ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವಂತೆ ಆಗಿದೆ. ಜಿಲ್ಲೆಯ ದೇವದುರ್ಗ, ಲಿಂಗಸುಗೂರು, ರಾಯಚೂರು ತಾಲೂಕಿನಲ್ಲಿ ನದಿ ಪಾತ್ರದಲ್ಲಿ ನಾಟಿ ಮಾಡಿದ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿನ ಭತ್ತ, ತೊಗರಿ, ತೋಟಗಾರಿಕೆ ಬೆಳೆಗಳು ನೀರು ಪಾಲಾಗಿವೆ.
ಜಿಲ್ಲೆಯ ಅಂದಾಜು 16,195 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಬೆಳೆಗೆ ಹಾನಿಯಾಗಿದೆ. ಇದರಲ್ಲಿ ದೇವದುರ್ಗ-10,293 ಹೆಕ್ಟೇರ್, ಲಿಂಗಸುಗೂರು-1,141 ಹೆಕ್ಟೇರ್, ರಾಯಚೂರು-3,344 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ತುಂಗಭದ್ರಾ ನದಿ ಪ್ರವಾಹದಿಂದ ಮಾನವಿ-1,289 ಹೆಕ್ಟೇರ್, ಸಿಂಧನೂರು-128 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ ಎಂದು ತಿಳಿದುಬಂದಿದೆ.