ರಾಯಚೂರು:ಇಲ್ಲಿನ ಯರಮರಸ್ ಬೈಪಾಸ್ ರಸ್ತೆಯ ಬ್ರಿಡ್ಜ್ ಬಳಿ ಅಪರಚೀತ ಮಹಿಳೆ ಶವ ಕೊಳತೆ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಹಿಳೆಯ ಗುರುತು ಪತ್ತೆಯಾಗಿಲ್ಲ. ಮಹಿಳೆಯ ವಯಸ್ಸು ಅಂದಾಜು 40 ವರ್ಷ ಇರಬಹುದೆಂದು ಹೇಳಲಾಗುತ್ತಿದೆ. ವಿಷಯ ತಿಳಿದು ಘಟನಾ ಸ್ಥಳಕ್ಕೆ ರಾಯಚೂರು ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಯರಮರಸ್ ಕ್ಯಾಂಪಿನ ಹತ್ತಿರ ಬರುವ ಬೈಪಾಸ್ ರಸ್ತೆಯ ರೈಲ್ವೆ ಬ್ರಿಡ್ಜ್ ಸಮೀಪ ದೊರೆತಿರುವ ಶವ ಕಳೆದ 15 ದಿನಗಳ ಹಿಂದೆ ಬಿದ್ದಿರಬಹುದು, ಹೀಗಾಗಿ ಶವ ಕೊಳತೆ ಸ್ಥಿತಿಯಲ್ಲಿ ದೊರಕಿದೆ. ಮಹಿಳೆ ಗುರುತು ಪತ್ತೆಗೆ ಕ್ರಮ ಕೈಗೊಳ್ಳಲಾಗುತ್ತದೆ. ಸದ್ಯ ಮೃತದೇಹವನ್ನು ರಿಮ್ಸ್ ಆಸ್ಪತ್ರೆಗೆ ರವಾನಿಸಿ, ತನಿಖೆ ಕೈಗೊಳ್ಳುವುದಾಗಿ ರಾಯಚೂರು ಗ್ರಾಮೀಣ ಪೊಲೀಸರು ತಿಳಿಸಿದ್ದಾರೆ. ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವುದಾ ಅಥವಾ ಬೇರೆ ಯಾರೋ ಕೊಲೆ ಮಾಡಿ ಇಲ್ಲಿ ಬಿಸಾಕಿದ್ದಾರೆಯೇ ಎಂಬ ಬಗ್ಗೆ ಪೊಲೀಸರ ತನಿಖೆಯಲ್ಲಿ ಗೊತ್ತಾಗಲಿದೆ.
ಇತ್ತೀಚಿನ ಘಟನೆಗಳು- ಎರಡು ದಿನಗಳ ಹಿಂದೆ ನಗರದ ಬಾವಿಯಲ್ಲಿ ಶವ ಪತ್ತೆ: ರಾಯಚೂರಿನ ಬಾವಿಯೊಂದರಲ್ಲಿ ಅಪರಿಚಿತ ವ್ಯಕ್ತಿಯ ಶವ ಕಳೆದ ಎರಡು ದಿನದ ಹಿಂದೆ ಪತ್ತೆಯಾಗಿತ್ತು. ನಗರದ ಸಾವಿತ್ರಿ ರೈಸ್ ಮಿಲ್ ಹಿಂಬದಿಯಲ್ಲಿರುವ ಬಾವಿಯಲ್ಲಿ ಈ ಮೃತದೇಹ ಪತ್ತೆಯಾಗಿತ್ತು. ಮೃತ ವ್ಯಕ್ತಿ ಗುರುತು ಪತ್ತೆಯಾಗಿಲ್ಲ. ಮೃತರ ವಯಸ್ಸು 30 ರಿಂದ 35 ಇರಬಹುದೆಂದು ಅಂದಾಜಿಸಲಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಮಾರ್ಕೆಟ್ ಯಾರ್ಡ್ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿದರು. ಘಟನೆಗೆ ಸಂಬಂಧಿಸಿದಂತೆ ಮಾರ್ಕೆಟ್ ಯಾರ್ಡ್ ಪೊಲೀಸರು ತನಿಖೆ ನಡೆಸುತ್ತಿದ್ದು, ಗುರುತು ಪತ್ತೆ ಹುಚ್ಚುವ ಕಾರ್ಯ ನಡೆಸಿದ್ದಾರೆ. ಫುಡ್ ಡೆಲಿವರಿ ಸಂಸ್ಥೆಯೊಂದರ ಟೀ ಶರ್ಟ್ ಧರಿಸಿದ್ದರಿಂದ ಮೃತ ಫುಡ್ ಡೆಲಿವರಿ ಬಾಯ್ ಇರಬಹುದೆಂದು ಹೇಳಲಾಗಿತ್ತು. ಆದರೆ ಫುಡ್ ಡೆಲಿವರಿ ಸಂಸ್ಥೆಯನ್ನು ಸಂಪರ್ಕಿಸಿದಾಗ ಮೃತನು ಅಲ್ಲಿ ಕೆಲಸ ಮಾಡುತ್ತಿರಲಿಲ್ಲ ಎಂದು ತಿಳಿದುಬಂದಿದೆ.
ಸಿಂಧನೂರು ಬಳಿ ಓಮ್ನಿ ಕಾರಿಗೆ ಬೆಂಕಿ: ರಾಯಚೂರು ಜಿಲ್ಲೆಯ ಸಿಂಧನೂರು ನಗರದ ಹೊರವಲಯದಲ್ಲಿ ನಡುರಸ್ತೆಯಲ್ಲೇ ಓಮಿನಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು, ಕ್ಷಣಾರ್ಧದಲ್ಲಿ ಹೊತ್ತಿ ಉರಿದಿರುವ ಘಟನೆ ನಡೆದಿದೆ. ಬಳ್ಳಾರಿಯಿಂದ ರಾಯಚೂರು ಕಡೆಗೆ ದಂಪತಿಗಳು ಓಮ್ನಿ ಕಾರಿನಲ್ಲಿ ಬರುತ್ತಿದ್ದ ವೇಳೆ ಬೆಂಕಿ ಕಾಣಿಸಿಕೊಂಡಿದೆ. ಕಾರಿನಲ್ಲಿ ಬೆಂಕಿ ಕಿಡಿ ಕಾಣಿಸಿಕೊಳ್ಳುತ್ತಿದ್ದಂತೆ ಎಚ್ಚೆತ್ತ ದಂಪತಿ ತಕ್ಷಣವೇ ಕಾರು ನಿಲ್ಲಿಸಿ ಹೊರಬಂದಿದ್ದಾರೆ. ಇದರಿಂದಾಗಿ ದಂಪತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಾರಿಗೆ ಬೆಂಕಿ ಹತ್ತಿರುವ ವಿಷಯ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ, ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಿಂಧನೂರು ಗ್ರಾಮೀಣ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ. ಆದರೆ ಈ ಕುರಿತಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ.
ಇದನ್ನೂ ಓದಿ: ರಾಮನಗರದಲ್ಲಿ ರೌಡಿ ಶೀಟರ್ನ ಬರ್ಬರ ಹತ್ಯೆ