ರಾಯಚೂರು:ತಂದೆಯನ್ನು ಹತ್ಯೆ ಮಾಡಿ ಹೆದ್ದಾರಿ ಪಕ್ಕದಲ್ಲಿ ಹೂತಿಟ್ಟ ಶವವನ್ನು ಹೊರತೆಗೆದ ಪೊಲೀಸರು, ಮರಣೋತ್ತರ ಪರೀಕ್ಷೆ ನಡೆಸಿ ಪ್ರಕರಣದ ತನಿಖೆ ನಡೆಸಿದ ಘಟನೆ ಗುರುವಾರ ರಾಯಚೂರಿನಲ್ಲಿ ನಡೆಯಿತು. ಆರೋಪಿ ಈರಣ್ಣ (35) ಎಂಬಾತ ಜುಲೈ 7ರಂದು ತನ್ನ ತಂದೆ ಶಿವನಪ್ಪ(70) ಅವರನ್ನು ಕೊಲೆಗೈದು ಶವವನ್ನು ಹೆದ್ದಾರಿ ಪಕ್ಕದಲ್ಲಿನ ಜಮೀನಿನಲ್ಲಿ ಹೂತಿದ್ದ. ವಡ್ಲೂರು ಗ್ರಾಮದಲ್ಲಿ ನಡೆದ ಘಟನೆ 12 ದಿನಗಳ ಬಳಿಕ ಬೆಳಕಿಗೆ ಬಂದಿತ್ತು.
ಪ್ಲಾಸ್ಟಿಕ್ ಚೀಲದಲ್ಲಿತ್ತು ಶವ:ಗುರುವಾರ ರಾಯಚೂರು ಸಹಾಯಕ ಆಯುಕ್ತೆ ಮೆಹಬೂನಿ ಸಮ್ಮುಖದಲ್ಲಿ ರಾಯಚೂರು ಗ್ರಾಮೀಣ ಪೊಲೀಸರು ಮೃತದೇಹ ಹೂತಿಟ್ಟ ಸ್ಥಳಕ್ಕೆ ತೆರಳಿ, ಜೆಸಿಬಿ ಮೂಲಕ ಅಗೆದು ಶವ ಹೊರತೆಗೆದರು. ಶವವನ್ನು ಪ್ಲಾಸ್ಟಿಕ್ ಚೀಲದಲ್ಲಿಟ್ಟು ಹೂತಿಟ್ಟಿದ್ದು ಕಂಡುಬಂದಿದೆ. ಶವ ಹೊರ ತೆಗೆದ ನಂತರ ಪಂಚನಾಮ ಮಾಡಿ, ಕಾನೂನು ನಿಯಮಗಳನ್ನು ಅನುಸರಿಸಲಾಯಿತು. ಸ್ಥಳದಲ್ಲಿಯೇ ಮರಣೋತ್ತರ ಪರೀಕ್ಷೆ ನಡೆಸಿ, ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿ ಮತ್ತೆ ಅಲ್ಲೇ ಸಂಸ್ಕಾರ ನಡೆಸಲಾಯಿತು. ಜಿಟಿಜಿಟಿ ಮಳೆಯ ನಡುವೆ ಕಾರ್ಯಾಚರಣೆ ನಡೆಯಿತು. ಸ್ಥಳದಲ್ಲಿ ನೂರಾರು ಜನ ಸೇರಿದ್ದರು.
ಹಣಕ್ಕಾಗಿ ಜಗಳ, ಕೊಲೆಯಲ್ಲಿ ಅಂತ್ಯ: ಭೂಸ್ವಾಧೀನದಲ್ಲಿ ಶಿವನಪ್ಪ ಜಮೀನು ಕಳೆದುಕೊಂಡಿದ್ದು, ಪರಿಹಾರದ ಹಣ ಪಡೆದಿದ್ದರು. ಈ ಹಣದ ವಿಚಾರವಾಗಿ ತಂದೆಯನ್ನು ಪೀಡಿಸಿ ಮಗ ಜಗಳವಾಡಿದ್ದನು. ಕಳೆದ ಜುಲೈ 7ರಂದು ಜಗಳ ತೀವ್ರಗೊಂಡು ಮನೆಯಲ್ಲಿದ್ದ ಪೈಪ್ ತೆಗೆದುಕೊಂಡು ತಂದೆಗೆ ಮಗ ಹೊಡೆದಿದ್ದ. ತೀವ್ರ ಗಾಯಗೊಂಡ ತಂದೆ ಸ್ಥಳದಲ್ಲೇ ಮೃತಪಟ್ಟಿದ್ದ. ಬಳಿಕ ಯಾರಿಗೂ ವಿಚಾರ ತಿಳಿಯದಂತೆ ಶವವನ್ನು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಒಬ್ಬನೇ ಜಮೀನಿಗೆ ಸಾಗಿಸಿ ಗುಂಡಿ ಅಗೆದು ಹೂತಿಟ್ಟಿದ್ದ. ಯಾರಿಗೂ ಅನುಮಾನ ಬರದಂತೆ ತಂದೆ ಕಾಣೆಯಾಗಿದ್ದಾನೆ ಎಂದು ರಾಯಚೂರು ಗ್ರಾಮೀಣ ಪೊಲೀಸರಿಗೆ ಸುಳ್ಳು ದೂರು ನೀಡಿದ್ದ.