ರಾಯಚೂರು: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂ ದಿನಕ್ಕೆ ಇಳಿಮುಖವಾಗುತ್ತಿದ್ದು, ಜಿಲ್ಲೆಯ ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ರಾಯಚೂರು: ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖ - ಜಿಲ್ಲಾ ವೈದ್ಯಾಧಿಕಾರಿ ಡಾ.ರಾಮಕೃಷ್ಣ
ರಾಯಚೂರು ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಇಳಿಮುಖವಾಗುತ್ತಿದೆ. ಆದರೆ ಇದೀಗ ಚಳಿಗಾಲ ಆರಂಭವಾಗಿದ್ದು, ಜನರು ಎಚ್ಚರಿಕೆಯಿಂದಿರಬೇಕು ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ. ರಾಮಕೃಷ್ಣ ಹೇಳಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ವೈದ್ಯಾಧಿಕಾರಿ ಡಾ. ರಾಮಕೃಷ್ಣ, 2020ರ ನವೆಂಬರ್ 5ರವರೆಗೆ 1,60,606 ಜನರ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೊಳಪಡಿಸಲಾಗಿದೆ. ಈ ಪೈಕಿ 1,45,766 ವರದಿಗಳು ನೆಗೆಟಿವ್ ಬಂದಿದ್ದು, 13,350 ಪ್ರಕರಣಗಳು ಪಾಸಿಟಿವ್ ಬಂದಿವೆ. ಕೊರೊನಾ ಸೋಂಕಿನಿಂದ 150 ಜನರು ಮೃತಪಟ್ಟಿದ್ದಾರೆ. ಇನ್ನೂ ಸಹ ಕೋವಿಡ್-19 ಟೆಸ್ಟಿಂಗ್ ನಡೆಸಲಾಗುತ್ತಿದೆ. ಆದರೆ ಕಳೆದ ಸುಮಾರು 20 ದಿನಗಳಿಂದ ಸೋಂಕಿನ ಪ್ರಮಾಣ ಇಳಿಮುಖವಾಗುತ್ತಲೇ ಸಾಗುತ್ತಿದೆ ಎಂದಿದ್ದಾರೆ.
ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿರುವುದು ಜಿಲ್ಲೆಯ ಜನತೆಗೆ ನೆಮ್ಮದಿ ತರಿಸಿದೆ. ಆದರೆ ಚಳಿಗಾಲ ಶುರುವಾಗಿದೆ. ಹೀಗಾಗಿ ನೆಗಡಿ, ಕೆಮ್ಮು, ಜ್ವರ ಸೇರಿದಂತೆ ಇತರ ಕಾಯಿಲೆಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತವೆ. ಹೀಗಾಗಿ ಜನರು ಎಚ್ಚರಿಕೆಯಿಂದಿರಬೇಕು. ಕೊರೊನಾ ಸೋಂಕಿನ ಕುರಿತು ಮುಂಜಾಗ್ರತೆ ವಹಿಸಬೇಕು. ಎರಡನೇ ಹಂತದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡರೆ ಮತ್ತಷ್ಟು ತೊಂದರೆ ಎದುರಾಗುವುದರಿಂದ ಎಚ್ಚರಿಕೆ ವಹಿಸಿ ಮುಂದುವರೆಯಬೇಕು ಎಂದರು.