ರಾಯಚೂರು:ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿ ಕಾರ್ಮಿಕನಿಗೆ ಕೊರೊನಾ ಶಂಕೆ ವ್ಯಕ್ತವಾಗಿದ್ದು, ಆತ ವಾಸವಿದ್ದ ಬಲಭೀಮ ಬಡಾವಣೆಯನ್ನು ಸೀಲ್ ಡೌನ್ ಮಾಡಿ ಆದೇಶಿಸಲಾಗಿದೆ.
ಕೊರೊನಾ ಪರೀಕ್ಷೆಗೆ ಸಹಕರಿಸದೇ ಹಟ್ಟಿಗೆ ಬಂದ ಕಾರ್ಮಿಕ: ಆತನ ಬಡಾವಣೆಯೇ ಸೀಲ್ ಡೌನ್ - ಚಿನ್ನದ ಗಣಿ ಕಾರ್ಮಿಕನಿಗೆ ಕೊರೊನಾ ಶಂಕೆ
ಹಟ್ಟಿ ಚಿನ್ನದ ಗಣಿ ಕಾರ್ಮಿಕನಿಗೆ ಕೊರೊನಾ ಇರುವ ಶಂಕೆಯನ್ನು ಅಪೊಲೋ ವೈದ್ಯರು ವ್ಯಕ್ತಪಡಿಸಿದ್ದು, ಈ ಸಂಬಂಧ ಪರೀಕ್ಷೆ ಮಾಡುವುದಾಗಿ ಹೇಳಿದ್ದರು. ಆದ್ರೆ ಆತ ಪರೀಕ್ಷೆಗೆ ಸಹಕರಿಸಿದೆ ಅಲ್ಲಿಂದ ಊರಿಗೆ ಬಂದು ಯಡವಟ್ಟು ಮಾಡಿದ್ದಾನೆ. ಈ ಹಿನ್ನೆಲೆ ಆತನಿರುವ ಬಡಾವಣೆಯಲ್ಲೇ ಅಧಿಕಾರಿಗಳು ಸೀಲ್ ಡೌನ್ ಮಾಡಿದ್ದಾರೆ.
ಕ್ಯಾನ್ಸರ್ ಸೇರಿದಂತೆ ಬಹು ರೋಗಗಳಿಂದ ಬಳಲುತ್ತಿದ್ದ ಬಲಭೀಮ ಬಡಾವಣೆಯ ಕಾರ್ಮಿಕನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ಅಪೊಲೋ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಅಪೊಲೋ ವೈದ್ಯರು ಆತನಿಗೆ ಕೊರೊನಾ ಇರುವ ಶಂಕೆ ವ್ಯಕ್ತಪಡಿಸಿದ್ದು, ಈ ಸಂಬಂಧ ಪರೀಕ್ಷೆ ಮಾಡುವುದಾಗಿ ಹೇಳಿದ್ದಾರೆ. ಆದರೆ ಕಾರ್ಮಿಕ ಪರೀಕ್ಷೆಗೆ ಸಹಕರಿಸಿದೇ ಅಲ್ಲಿಂದ ವಾಪಸಾಗಿದ್ದಾನೆ. ಈ ಕುರಿತು ಮಾಹಿತಿ ದೊರೆಯುತ್ತಿದ್ದಂತೆ ಡಿವೈಎಸ್ಪಿ, ತಹಶೀಲ್ದಾರ್ ಚಾಮರಾಜ ಪಾಟೀಲ್ ಭೇಟಿ ನೀಡಿ ಸಮಗ್ರ ಮಾಹಿತಿ ಪಡೆದರು. ಬಳಿಕ ರಾಯಚೂರು ರಿಮ್ಸ್ ಆಸ್ಪತ್ರೆಗೆ ಕಾರ್ಮಿಕನನ್ನು ಕಳುಹಿಸಿದ್ದಾರೆ.
ಸದ್ಯ ಬಲಭೀಮ ಬಡಾವಣೆಗೆ ಭೇಟಿ ನೀಡಿದ ಅಧಿಕಾರಿಗಳು ಅಲ್ಲಿ ಸೀಲ್ ಡೌನ್ ಘೋಷಣೆ ಮಾಡಿ, ಧ್ವನಿವರ್ಧಕ ಮೂಲಕ ಬಡಾವಣೆ ಜನತೆ ಹೊರ ಬರದಂತೆ ಮನವಿ ಮಾಡಿದರು. ಅಗತ್ಯ ವಸ್ತುಗಳನ್ನು ಪುರಸಭೆ ವ್ಯವಸ್ಥೆ ಮಾಡುತ್ತಿದ್ದು, ಬಡಾವಣೆಯಿಂದ ಹೊರ ಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ.