ರಾಯಚೂರು: ಬೆಂಗಳೂರಿಗೆ ಗುಳೆ ಹೋಗಿದ್ದ ವ್ಯಕ್ತಿ ಮರಳಿ ಊರಿಗೆ ಬಂದು ಏಕಾಏಕಿ ಮೃತಪಟ್ಟ ಘಟನೆ ಜಿಲ್ಲೆಯಲ್ಲಿ ನಡೆದಿದ್ದು, ಗ್ರಾಮಸ್ಥರಲ್ಲಿ ಕೊರೊನಾ ವೈರಸ್ ಭೀತಿ ಮೂಡಿದೆ.
ಬೆಂಗಳೂರಿನಿಂದ ಬಂದ ವ್ಯಕ್ತಿಯ ಹಠಾತ್ ಸಾವು: ಕೊರೊನಾ ಭೀತಿಯಲ್ಲಿ ಗ್ರಾಮಸ್ಥರು! - ಕೊರೊನಾ ವೈರಸ್
ಬೆಂಗಳೂರಿಗೆ ಗುಳೆ ಹೋಗಿದ್ದ ರಾಯಚೂರು ಜಿಲ್ಲೆಯ ವ್ಯಕ್ತಿಯೊಬ್ಬರು ಹಠಾತ್ ಸಾವನ್ನಪ್ಪಿದ್ದು, ಮೃತರ ಕುಟುಂಬಸ್ಥರು ಮತ್ತು ಗ್ರಾಮಸ್ಥರಲ್ಲಿ ಕೊರೊನಾ ಸೋಂಕು ಹರಡುವ ಭೀತಿ ಉಂಟಾಗಿದೆ. ಇನ್ನು ಜನ ಜಿಲ್ಲಾಡಳಿತ ಮತ್ತು ತಾಲೂಕಾಡಳಿತಕ್ಕೆ ಮಾಹಿತಿ ನೀಡಿದ್ದರೂ ಸಹ ಅಧಿಕಾರಿಗಳು ಭೇಟಿ ನೀಡಿಲ್ಲ ಎನ್ನಲಾಗಿದೆ.
ಲಿಂಗಸುಗೂರು ತಾಲೂಕಿನ ರೋಡಲಬಂಡ(ತವಗ)ದಲ್ಲಿ ಮಲ್ಲಪ್ಪ ತಳವಾರ ಎಂಬುವವರು ಏಕಾಏಕಿ ಮೃತಪಟ್ಟಿದ್ದು, ಸಂಬಂಧಿಗಳು, ಗ್ರಾಮಸ್ಥರು ಮೃತರ ಮನೆಯತ್ತ ಸುಳಿಯದಿರುವುದು ಹಲವು ಸಂಶಯಕ್ಕೆ ದಾರಿ ಮಾಡಿಕೊಟ್ಟಿದೆ. ಬೆಂಗಳೂರಿಗೆ ಗುಳೆ ಹೋಗಿದ್ದ ಮಲ್ಲಪ್ಪನಿಗೆ ನಾಲ್ಕು ದಿನಗಳಿಂದ ಕೆಮ್ಮು, ಉಸಿರಾಟ ತೊಂದರೆ ಕಾಣಿಸಿಕೊಂಡಿತ್ತು ಎನ್ನಲಾಗಿದೆ. ಹೆಚ್ಚಿನ ಚಿಕಿತ್ಸೆ ಪಡೆಯದೆ ಸ್ವಗ್ರಾಮಕ್ಕೆ ವಾಪಸಾಗಿ ಏಕಾಏಕಿ ಮೃತಪಟ್ಟಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಕೋವಿಡ್-19 ಹರಡುವ ಭೀತಿ ಹಾಗೂ ಬೆಂಗಳೂರಿನಿಂದ ವಾಪಸಾದ ದಿನವೇ ಮೃತಪಟ್ಟಿರುವುದು ಹಲವು ಸಂಶಯಗಳಿಗೆ ದಾರಿ ಮಾಡಿಕೊಟ್ಟಿದೆ. ಇದರಿಂದ ಸಂಬಂಧಿಕರು, ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ. ಅಲ್ಲದೆ ತಾಲೂಕು ಹಾಗೂ ಜಿಲ್ಕಾಡಳಿತಕ್ಕೆ ಮಾಹಿತಿ ನೀಡಿದರೂ ಗ್ರಾಮಕ್ಕೆ ಭೇಟಿ ನೀಡುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.