ರಾಯಚೂರು: ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳ ಏರಿಕೆಗೆ ಪ್ರಮುಖ ಕಾರಣ ಮಸ್ಕಿಂ ಉಪ ಚುನಾವಣೆ ಎನ್ನುವ ಮಾತುಗಳ ನಡುವೆ, ಉಪ ಚುನಾವಣೆ ಕಾರ್ಯಕ್ಕೆ ನಿಯುಕ್ತಿಗೊಂಡಿದ್ದ ನಾಲ್ವರು ಶಿಕ್ಷಕರು ಸೇರಿ ಜಿಲ್ಲೆಯಲ್ಲಿ 20 ಶಿಕ್ಷಕರು ಕೊರೊನಾಗೆ ಬಲಿಯಾಗಿದ್ದಾರೆ.
ರಾಜ್ಯದ ಗಮನ ಸೆಳೆದಿದ್ದ ಮಸ್ಕಿ ಉಪ ಚುನಾವಣೆಗೂ ಮುನ್ನ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಬೆರಳೆಣಿಕೆಯಷ್ಟು ಇದ್ದು, ಚುನಾವಣೆ ನಂತರ ಕೊರೊನಾ ಸ್ಫೋಟಗೊಂಡಿದೆ. ಸದ್ಯ ಏಳು ಸಾವಿರಕ್ಕೂ ಅಧಿಕ ಸಕ್ರಿಯ ಪ್ರಕರಣಗಳು ಇವೆ. ಜಿಲ್ಲೆಯ ದೇವದುರ್ಗ ಹಾಗೂ ರಾಯಚೂರು ತಲೂಕಿನ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ 250 ಶಿಕ್ಷಕರು ಉಪ ಚುನಾವಣೆ ಕಾರ್ಯಕ್ಕೆ ನಿಯೋಜನೆ ಗೊಂಡಿದ್ದು, ಇದರಲ್ಲಿ 50ಕ್ಕೂ ಅಧಿಕ ಶಿಕ್ಷಕರು ಸೋಂಕಿತರಾಗಿ, ನಾಲ್ವರು ಮೃತ ಪಟ್ಟಿದ್ದಾರೆ.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಚಂದ್ರಶೇಖರರೆಡ್ಡಿ ಶಿಕ್ಷಕರನ್ನು ಸರ್ಕಾರದ ಅನ್ಯ ಕಾರ್ಯಗಳಾದ ಮಾಹಿತಿ ಕೇಂದ್ರ, ಕೊರೊನಾ ಚೆಕ್ಪೋಸ್ಟ್ಗಳಲ್ಲಿ ಪ್ರಯಾಣಿಕರ ಮಾಹಿತಿ ಸಂಗ್ರಹ ಕಾರ್ಯದಲ್ಲಿ ಮುಂಚೂಣಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೊರೊನಾ ಎರಡನೇ ಅಲೆಯಲ್ಲಿ ಸುಮಾರು ಜಿಲ್ಲೆಯ 200 ಶಿಕ್ಷಕರು ಸೋಂಕಿತರಾಗಿದ್ದಾರೆ, ಇದರಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಒಟ್ಟು 20 ಶಿಕ್ಷಕರು ಮೃತಪಟ್ಟಿದ್ದಾರೆ. ಸೋಂಕಿತ ಶಿಕ್ಷಕರು ವೈದ್ಯಕೀಯ ಚಿಕಿತ್ಸೆಗಾಗಿ ಪರದಾಡುವಂತಾಗಿದ್ದು, ಸರ್ಕಾರ ಸೂಕ್ತ ಚಿಕಿತ್ಸೆಗೆ ಮುಂದಾಗಬೇಕು ಎಂದು ಶಿಕ್ಷಕರ ಸಂಘಗಳ ಒತ್ತಾಯವಿದೆ.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಚಂದ್ರಶೇಖರರೆಡ್ಡಿ ಮಾತನಾಡಿ, ಶಿಕ್ಷಕರನ್ನು ಫ್ರಂಟ್ ಲೈನ್ ವಾರಿಯರ್ಸ್ ಎಂದು ಪರಿಗಣಿಸಿದ್ದು, ಈಗಾಗಲೇ 45 ವರ್ಷ ಮೆಲ್ಪಟ್ಟ ಶಿಕ್ಷಕರು ಲಸಿಕೆ ಪಡೆದಿದ್ದಾರೆ. ಉಳಿದ ಶಿಕ್ಷಕರಿಗೆ ಲಸಿಕೆ ಕೊಡಿಸಬೇಕು, ಜಿಲ್ಲೆಯಲ್ಲಿ 200ಕ್ಕೂ ಅಧಿಕ ಶಿಕ್ಷಕರು ಕೊರೊನಾ ಸೋಂಕಿತರಾಗಿದ್ದಾರೆ. ಅಲ್ಲದೇ ಮೃತ ಪಟ್ಟಿರುವ 20 ಶಿಕ್ಷಕರ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.