ರಾಯಚೂರು :ನಗರದಲ್ಲಿ ಕಲುಷಿತಗೊಂಡ ಕುಡಿಯುವ ನೀರನ್ನು ಪೂರೈಕೆ ಮಾಡಿರುವುದನ್ನು ಖಂಡಿಸಿ ಮತ್ತು ಇದಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸಿಟಿಜನ್ ಫೋರಂನಿಂದ ಸೋಮವಾರ ಬಂದ್‌ಗೆ ಕರೆ ನೀಡಲಾಗಿತ್ತು. ಈ ಬಂದ್‌ಗೆ ನಗರದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಬಂದ್ ಹಿನ್ನೆಲೆ ಪ್ರತಿಭಟನಾಕಾರರು ನಗರದಲ್ಲಿ ಬೈಕ್‌ನಲ್ಲಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಅಂಗಡಿ-ಮುಂಗಟ್ಟುಗಳನ್ನ ಬಂದ್ಗೊಳಿಸುವಂತೆ ಒತ್ತಾಯ ಮಾಡಿದ್ರು. ನಗರಸಭೆ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು.
ಬಸ್ ಸಂಚಾರ, ಶಾಲೆ-ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸಿದ್ದು, ನಗರಸಭೆ ಮುಂದೆ ಪ್ರತಿಭಟನೆ ನಡೆಯುತ್ತಿದ್ದರಿಂದ ಪೊಲೀಸರು ವಾಹನ ಸಂಚಾರ ಸ್ಥಗಿತಗೊಳಿಸಿದ್ದರು. ಕೆಲವು ದಿನಗಳಿಂದ ನಗರದಲ್ಲಿ ಕಲುಷಿತ ನೀರು ಸರಬರಾಜು ಮಾಡಲಾಗುತ್ತಿದೆ. ಇದರಿಂದ ವಾಂತಿ,ಬೇಧಿ ಉಲ್ಬಣಗೊಂಡು ಮೂವರು ಮೃತಪಟ್ಟಿದ್ದಾರೆ.