ಕರ್ನಾಟಕ

karnataka

ಕುರುಬರ ಸಮುದಾಯಕ್ಕೆ ಕಾಂಗ್ರೆಸ್ ಪಕ್ಷ ಅನ್ಯಾಯ ಮಾಡಿದೆ: ಸಿದ್ಧರಾಮಾನಂದಪುರ ಸ್ವಾಮೀಜಿ

By

Published : Mar 29, 2023, 10:51 AM IST

ಟಿಕೆಟ್‌ ಹಂಚಿಕೆಯಲ್ಲಿ ಕುರುಬ ಸಮುದಾಯದವರಿಗೆ ಕಾಂಗ್ರೆಸ್‌ ಅನ್ಯಾಯ ಮಾಡಿದೆ ಎಂದು ಸಿದ್ಧರಾಮಾನಂದಪುರ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

the-congress-party-ignored-the-kuruba-community
ಕುರುಬ ಸಮುದಾಯವರಿಗೆ ಟಿಕೆಟ್​ ನೀಡುವುದರಲ್ಲಿ ಕಾಂಗ್ರೆಸ್ ಪಕ್ಷ ಅನ್ಯಾಯ ಮಾಡಿದೆ : ಶ್ರೀಸಿದ್ಧರಾಮಾನಂದಪುರ ಸ್ವಾಮಿ

ಶ್ರೀ ಸಿದ್ಧರಾಮಾನಂದಪುರ ಸ್ವಾಮಿ ಹೇಳಿಕೆ

ರಾಯಚೂರು: "ಕುರುಬ ಸಮುದಾಯವನ್ನು ಕಾಂಗ್ರೆಸ್ ಪಕ್ಷ ತಾತ್ಸಾರ ಮಾಡಿ, ಕಲ್ಯಾಣ ಕರ್ನಾಟಕ, ಉತ್ತರ ಕರ್ನಾಟಕ ಭಾಗದಲ್ಲಿ ಗೆಲ್ಲುವಂತಹ ಅಭ್ಯರ್ಥಿಗಳಿದ್ದರೂ ಯಾರಿಗೂ ಟಿಕೆಟ್​ ನೀಡಿಲ್ಲ" ಎಂದು ಎಂದು ತಿಂಥಿಣಿ ಕಾಗಿನೆಲೆ ಕನಕಗುರು ಪೀಠದ ಶ್ರೀ ಸಿದ್ಧರಾಮಾನಂದಪುರ ಸ್ವಾಮಿ ಹೇಳಿದ್ದಾರೆ. ನಗರದ ಖಾಸಗಿ ಹೊಟೇಲ್​ನಲ್ಲಿ ಮಂಗಳವಾರ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡುತ್ತಾ, "ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್​ ಪಕ್ಷ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಕುರುಬ ಸಮುದಾಯಕ್ಕೆ ಅನ್ಯಾಯವಾಗಿದೆ. ಕಲ್ಯಾಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಗೆಲ್ಲುವಂತಹ ಹಲವು ಅಭ್ಯರ್ಥಿಗಳಿದ್ದಾರೆ. ಆದರೆ, ಅವರಿಗೆ ಯಾರಿಗೂ ಟಿಕೆಟ್ ನೀಡಿಲ್ಲ. ಇದಕ್ಕೆ ಬದಲಾಗಿ ಕುರುಬ ಸಮುದಾಯವನ್ನು ತಾತ್ಸಾರ ಭಾವನೆಯಿಂದ ನೋಡುತ್ತಿದ್ದಾರೆ" ಎಂದು ದೂರಿದರು.

"ಸಾಮಾಜಿಕ ನ್ಯಾಯದಡಿಯಲ್ಲಿ ಕಾಂಗ್ರೆಸ್​ ಪಕ್ಷವಿದೆ ಎಂದು ಕುರುಬ ಸಮಾಜ ಬೆಂಬಲಿಸುತ್ತಾ ಬಂದಿದೆ. ಹಾಗಂತ ಜೀತಾದಾಳುಗಳು, ಸನ್ಯಾಸಿಗಳು ಆಗಿಲ್ಲ. ಹೀಗಾಗಿ ತಾತ್ಸಾರದಿಂದ ಕಾಣದೆ ಎರಡನೇ ಪಟ್ಟಿ ಬಿಡುಗಡೆ ಮಾಡುವಾಗ ಕುರುಬ ಸಮುದಾಯದ ಜನರಿಗೆ ಟಿಕೆಟ್ ನೀಡಬೇಕು" ಎಂದು ಒತ್ತಾಯಿಸಿದರು. "ದಿ.ದೇವರಾಜು ಅರಸು ಕಾಲದಿಂದಲೂ 25 ಮಂದಿಗೆ ಟಿಕೆಟ್ ನೀಡಲಾಗುತ್ತಿದೆ. ಆದರೆ, ಈಗ ಟಿಕೆಟ್ ಹಂಚಿಕೆಯಲ್ಲಿ ಏರಿಕೆ ಕಾಣುವ ಬದಲಾಗಿ ಕಡಿಮೆಯಾಗುತ್ತಲೇ ಬರುತ್ತಿದೆ" ಎಂದರು.

"ಇತ್ತೀಚೆಗೆ ಕಾಂಗ್ರೆಸ್ ಬಿಡುಗಡೆಗೊಳಿಸಿದ 124 ಅಭ್ಯರ್ಥಿ ಪಟ್ಟಿಯಲ್ಲಿ ಕುರುಬ ಸಮಾಜಕ್ಕೆ ಸೇರಿದ ಆರು ಜನರಿಗೆ ಮಾತ್ರ ಟಿಕೆಟ್ ನೀಡಲಾಗಿದೆ. ಅದರಲ್ಲಿ ಕಲ್ಯಾಣ ಕರ್ನಾಟಕ, ಉತ್ತರ ಕರ್ನಾಟಕ ಭಾಗದಲ್ಲಿ ಇಬ್ಬರು ಹಾಲಿ ಶಾಸಕರಿಗೆ ಮಾತ್ರ ಟಿಕೆಟ್ ನೀಡಲಾಗಿದೆ. ಚುನಾವಣೆಯಲ್ಲಿ ಗೆಲ್ಲುವಂತಹ ಪ್ರಬಲ ಟಿಕೆಟ್ ಆಕಾಂಕ್ಷಿಗಳು ಪಟ್ಟಿಯಲ್ಲಿ ಸೇರಿಲ್ಲ. ಇದರಿಂದಾಗಿ ಕಾಂಗ್ರೆಸ್ ಪಕ್ಷ ಸಮುದಾಯವನ್ನು ತಾತ್ಸಾರ ಮಾಡಿ, ಟಿಕೆಟ್ ನೀಡುವ ವಿಚಾರದಲ್ಲಿ ಮೋಸ ಮಾಡುವ ಮೂಲಕ ಅನ್ಯಾಯ ಮಾಡಿದೆ" ಎಂದು ದೂರಿದರು.

ಇದನ್ನೂ ಓದಿ:ನನ್ನ‌ ವಿರುದ್ಧ ಬಂದಿರುವ ಭ್ರಷ್ಟಾಚಾರದ ಆರೋಪ ಶುದ್ಧ ಸುಳ್ಳು, ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ: ಸಚಿವ ಬೈರತಿ ಬಸವರಾಜ್

"ಮಠಾಧೀಶರು ರಾಜಕೀಯ ಪ್ರವೇಶ ಮಾಡಬಾರದು. ಆದರೆ ಸಮುದಾಯದ ಜನರ ಒತ್ತಾಯದ ಮೇರೆಗೆ, ಸಮುದಾಯದ ಹಿತ ಕಾಪಾಡುವ ಹಿನ್ನೆಲೆಯಲ್ಲಿ ನಾವು ಮುಂದೆ ಬರುವ ಅನಿವಾರ್ಯ ಸೃಷ್ಠಿಯಾಗಿದೆ. ಹೀಗಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಹಿಂದುಳಿದವರಿಗೆ ವರ್ಗದವರಿಗೆ ಧ್ವನಿಯಾಗಲು ಕುರುಬ ಸಮುದಾಯವರಿಗೆ ಕಾಂಗ್ರೆಸ್‌ನಿಂದ ಬಿಡುಗಡೆ ಆಗಲಿರುವ ಎರಡನೇ ಪಟ್ಟಿಯಲ್ಲಿ ಉತ್ತರ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಟಿಕೆಟ್ ನೀಡಬೇಕು. ಹಾಗೊಂದು ವೇಳೆ ತಾತ್ಸಾರ ಮಾಡಿದರೆ, ಚುನಾವಣೆ ಸಂದರ್ಭದಲ್ಲಿ ಗಂಭೀರ ತಿರ್ಮಾನವನ್ನು ಕೈಗೊಳ್ಳಬೇಕಾಗುತ್ತದೆ" ಎಂದು ಕನಕಗುರು ಪೀಠದ ಸಿದ್ಧರಾಮಾನಂದಪುರ ಸ್ವಾಮಿ ಕಾಂಗ್ರೆಸ್​ ಪಕ್ಷದ ನಾಯಕರಿಗೆ ಎಚ್ಚರಿಕೆ ನೀಡಿದರು.

ಇದನ್ನೂ ಓದಿ:ಚುನಾವಣೆ ಘೋಷಣೆಯಾದ ನಂತರವೇ ಬಿಜೆಪಿಯ ಮೊದಲ ಪಟ್ಟಿ ಬಿಡುಗಡೆ: ಜಗದೀಶ್ ಶೆಟ್ಟರ್

ABOUT THE AUTHOR

...view details