ರಾಯಚೂರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಾಗೂ ಕಾಂಗ್ರೆಸ್ನವರಿಗೆ ನಾಡಿನ ಪ್ರಜ್ಞೆ, ರಾಷ್ಟ್ರೀಯ ಪ್ರಜ್ಞೆ ಇಲ್ಲವೆಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಮಂತ್ರಾಲಯದಲ್ಲಿ ಶ್ರೀಗುರು ರಾಘವೇಂದ್ರ ಸ್ವಾಮಿಗಳ ಮಧ್ಯಾರಾಧನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಎಲ್ಲದರ ಬಗ್ಗೆ ನಿಕೃಷ್ಟವಾಗಿ ಮಾತನಾಡುವುದು ಸಿದ್ದರಾಮಯ್ಯನವರ ಚಾಳಿ. ಕಾಂಗ್ರೆಸ್ನವರು ಧರ್ಮದ ಆಧಾರದ ಮೇಲೆ ದೇಶವನ್ನು ಒಡೆದಿದ್ದಾರೆ. ತಿರಂಗಾ ರಾಷ್ಟ್ರೀಯ ಭಾವನೆ ಮೂಡಿಸುತ್ತದೆ. ಎಲ್ಲೆಡೆ ರಾಷ್ಟ್ರಧ್ವಜವನ್ನು ಹಾರಿಸಲಾಗುತ್ತದೆ. ಆರ್ಎಸ್ಎಸ್ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ನಿಂದ ಪಾಠ ಕಲಿಯುವಂತದ್ದು ಏನೂ ಇಲ್ಲ. ನಮ್ಮನ್ನೆಲ್ಲ ಆರ್ಎಸ್ಎಸ್ ಶಾಖೆಯಲ್ಲೇ ಸಂಸ್ಕಾರ ತುಂಬಿ ದೇಶ ಸೇವೆಗೆ ಬಿಟ್ಟಿದ್ದಾರೆ ಎಂದರು.
ಸರ್ಕಾರದಲ್ಲಿ ಉದ್ಯೋಗ ಮಾಡಬೇಕಾದರೆ ಮಂಚ ಏರಬೇಕು ಎನ್ನುವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಪ್ರಿಯಾಂಕ್ ಖರ್ಗೆ ಪ್ರಚಾರ ಖರ್ಗೆಯಾಗಿದ್ದಾರೆ. ಪ್ರಚಾರಕ್ಕಾಗಿ ಏನೇನೊ ಮಾತನಾಡುತ್ತಾರೆ. ಅವರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಪಿಎಸ್ಐ ಹಗರಣದಲ್ಲಿ ತಮಗೆ ಏನೋ ಗೊತ್ತಿದೆ ಎಂದರು. ದಾಖಲಾತಿ ಕೇಳಿದರೆ ಓಡಿ ಹೋದರು ಎಂದು ವ್ಯಂಗ್ಯವಾಡಿದರು.