ಮಸ್ಕಿ (ರಾಯಚೂರು): ಇನ್ಮುಂದೆ ಕ್ಷೇತ್ರದಲ್ಲಿ ನಿನ್ನ ಆಟ, ನಿನ್ನ ಗೂಂಡಾಗಿರಿ, ಬೆದರಿಕೆಗಳು ನಡೆಯಲ್ಲ. ಕ್ಷೇತ್ರದ ಸ್ವಾಭಿಮಾನ, ಜನರ ನಂಬಿಕೆ ಮಾರಾಟ ಮಾಡಿಕೊಂಡ ನಿನಗೆ ತಕ್ಕ ಪಾಠವನ್ನು ಜನರು ಚುನಾವಣೆಯಲ್ಲಿ ಕಲಿಸುತ್ತಾರೆ ಎಂದು ಬಿಜೆಪಿ ಅಭ್ಯರ್ಥಿಗೆ ಕಾಂಗ್ರೆಸ್ ಅಭ್ಯರ್ಥಿ ಆರ್.ಬಸವನಗೌಡ ತುರುವಿಹಾಳ ಎಚ್ಚರಿಸಿದ್ದಾರೆ.
ಮಸ್ಕಿ ಪಟ್ಟಣದಲ್ಲಿ ಇತ್ತೀಚೆಗೆ ಆಯೋಜಿಸಿದ ಪಕ್ಷದ ಪ್ರಚಾರದ ಬಹಿರಂಗ ಸಮಾವೇಶದಲ್ಲಿ ಮಾತನಾಡುವ ಮೂಲಕ ಬಿಜೆಪಿ ಅಭ್ಯರ್ಥಿ ಪ್ರತಾಪ್‌ಗೌಡ ಪಾಟೀಲ್ ಮೇಲೆ ಕಾಂಗ್ರೆಸ್ ಅಭ್ಯರ್ಥಿ ಆರ್.ಬಸವನಗೌಡ ತುರುವಿಹಾಳ ಹರಿಹಾಯ್ದಿದ್ದಾರೆ. ಮಸ್ಕಿ ವಿಧಾನಸಭಾ ಕ್ಷೇತ್ರದ ಬೈ ಎಲೆಕ್ಷನ್ನಲ್ಲಿ ಕಾಂಗ್ರೆಸ್ ಮುಖಂಡರಾದ ಅಮರೇಗೌಡ ಪಾಟೀಲ್ ಬಯ್ಯಾಪುರ, ಹಂಪನಗೌಡ ಬಾದರ್ಲಿಯವರಿಗೆ ಹಗುರವಾಗಿ ಮಾತನಾಡುತ್ತಿರುವುದರ ಬಗ್ಗೆ ಕೇಳಿದ್ದೇನೆ. ಇದೇ ನಾಯಕರು ಕಳೆದ ಎರಡು ಸಾರ್ವತ್ರಿಕ ಚುನಾವಣೆಯಲ್ಲಿ ನಿಮ್ಮ ಪರವಾಗಿ ಪ್ರಚಾರ ಮಾಡಿದ್ದಾರೆ. ಅದರ ಫಲವಾಗಿ ಎರಡು ಬಾರಿ ಶಾಸಕರಾಗಿದ್ದೀರಾ ಎಂದು ಕಿಡಿಕಾರಿದರು.