ಕಲಬುರಗಿ : ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ನೆಟ್ಟಾರು ಕೊಲೆ ಖಂಡಿಸಿ ಹಲವು ಬಿಜೆಪಿಯಲ್ಲಿ ರಾಜೀನಾಮೆ ಪರ್ವ ಮುಂದುವರೆದಿದೆ. ಚಿಂಚೋಳಿ ತಾಲೂಕಿನ ಬಿಜೆಪಿ ಒಬಿಸಿ ಮೋರ್ಚಾದ ಕಾರ್ಯದರ್ಶಿ ಜಯಪ್ರಕಾಶ್ ತಳವಾರ್ ಪಕ್ಷದ ಹುದ್ದೆಗೆ ರಾಜೀನಾಮೆ ನೀಡುವ ಮೂಲಕ ಸರ್ಕಾರದ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಈ ಬಗ್ಗೆ ಚಿಂಚೋಳಿ ತಾಲೂಕಾ ಅಧ್ಯಕ್ಷರಿಗೆ ರಾಜೀನಾಮೆ ಪತ್ರ ಸಲ್ಲಿಸಿರುವ ಜೈ ಪ್ರಕಾಶ ತಳವಾರ ಅವರು ಪ್ರವೀಣ್ ಹತ್ಯೆಯನ್ನು ಖಂಡಿಸಿದ್ದಾರೆ.
ರಾಜ್ಯ ಮತ್ತು ಕೇಂದ್ರದಲ್ಲೂ ನಮ್ಮದೇ ಸರ್ಕಾರ ಇದ್ದಾಗಿಯೂ ಬಿಜೆಪಿ ಕಾರ್ಯಕರ್ತರಿಗೆ ರಕ್ಷಣೆ ಸಿಗುತ್ತಿಲ್ಲ. ಗ್ರಾಮ ಪಂಚಾಯತಿಯಿಂದ ಹಿಡಿದು ರಾಷ್ಟ್ರಪತಿಯವರೆಗೂ ಅಧಿಕಾರದಲ್ಲಿರುವ ಪಕ್ಷದ ಕಾರ್ಯಕರ್ತನಿಗೆ ರಕ್ಷಣೆ ಇಲ್ಲ ಎಂದಾದರೆ ಹೇಗೆ ? ಇಂತಹ ಪಕ್ಷದಲ್ಲಿ ನಾವೇಕೆ ಇರಬೇಕು? ಸರ್ಕಾರ ಬಗ್ಗೆ ಎಚ್ಚೆತ್ತುಕೊಳ್ಳಲಿ ಎನ್ನುವ ಕಾರಣಕ್ಕಾಗಿ ರಾಜೀನಾಮೆ ನೀಡುತ್ತಿದ್ದೇನೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ರಾಯಚೂರು :ಪ್ರವೀಣ್ ನೆಟ್ಟಾರು ಹತ್ಯೆಯನ್ನು ಖಂಡಿಸಿ ರಾಯಚೂರು ಜಿಲ್ಲೆಯಲ್ಲೂ ಯುವ ಮೋರ್ಚಾದ ಪದಾಧಿಕಾರಿಗಳು ರಾಜೀನಾಮೆ ನೀಡಿದ್ದಾರೆ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದರೂ ಪಕ್ಷದ ಕಾರ್ಯಕರ್ತರ ಜೀವಕ್ಕೆ ಬೆಲೆ ಇಲ್ಲದಂತಾಗಿದೆ. ಸಾಲು ಸಾಲು ಹತ್ಯೆಗಳು ನಡೆದರೂ ಇದನ್ನು ಮಟ್ಟ ಹಾಕುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಕಾರ್ಯಕರ್ತರು ದೂರಿದ್ದಾರೆ. ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ ಸಂಬಂಧ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಸೇರಿದಂತೆ ಶಿಕ್ಷಕ ಪ್ರಕೋಷ್ಟದ ಅಧ್ಯಕ್ಷರು ಸಾಮೂಹಿಕ ರಾಜೀನಾಮೆ ಸಲ್ಲಿಸಿದ್ದಾರೆ.