ರಾಯಚೂರು :ಕೇಂದ್ರ ಹಾಗೂ ರಾಜ್ಯ ಸರ್ಕಾಗಳ ರೈತ ವಿರೋಧಿ ನೀತಿ ಖಂಡಿಸಿ ಹಾಗೂ ಎಪಿಎಂಸಿ ತಿದ್ದುಪಡಿ ಕಾಯ್ದೆ ವಾಪಸ್ ಪಡೆಯಲು ಆಗ್ರಹಿಸಿ ಅಖಿಲ ಭಾರತ ರೈತ ಸಮನ್ವಯ ಸಮಿತಿ ನೇತೃತ್ವದಲ್ಲಿ ರೈತರು ಉಪವಾಸ ಸತ್ಯಾಗ್ರಹ ನಡೆಸಿದರು.
ರೈತ ವಿರೋಧಿ ನೀತಿ ಖಂಡಿಸಿ ಅಖಿಲ ಭಾರತ ರೈತ ಸಮನ್ವಯ ಸಮಿತಿಯಿಂದ ಸತ್ಯಾಗ್ರಹ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿರುವ ಮಹಾತ್ಮ ಗಾಂಧಿ ವೃತ್ತದ ಬಳಿ ಉಪವಾಸ ಸತ್ಯಾಗ್ರಹ ನಡೆಸಿದ ಪದಾಧಿಕಾರಿಗಳು, ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸುವ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾರ್ಪೊರೇಟ್ ಕಂಪನಿಯ ಪರ ಕಾರ್ಯ ನಿರ್ವಹಿಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಪಿಎಂಸಿ ಕಾಯ್ದೆ, ಭೂ ಸುಧಾರಣೆ ಕಾಯ್ದೆ, ಅಗತ್ಯ ವಸ್ತುಗಳ ಕಾಯ್ದೆ ತಿದ್ದುಪಡಿ, ಕಾರ್ಮಿಕ ಕಾಯ್ದೆ, ವಿದ್ಯುತ್ ಕಾಯ್ದೆ ತಿದ್ದುಪಡಿಗಳನ್ನು ವಾಪಸ್ ಪಡೆಯಬೇಕು. ರೈತಾಪಿ ವರ್ಗ ಅವಲಂಬಿತ ಕೃಷಿಗೆ ಅಭದ್ರತೆ ಕಾಡುತ್ತಿದೆ. ದೇಶದಲ್ಲಿ ಆಹಾರ ಉತ್ಪನ್ನಗಳ ಉತ್ಪಾದನೆ ಕುಂಠಿತಕ್ಕೆ ಕಾರಣವಾಗಿದೆ.
ಕೂಡಲೇ ಸಂಸತ್ತಿನಲ್ಲಿ ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದ ಕಾಯ್ದೆಗಳ ಅನುಮೋದನೆ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು. ಶಿಕ್ಷಣ, ಆರೋಗ್ಯ, ರೈಲು, ರಸ್ತೆ, ವಿದ್ಯುತ್, ದೂರಸಂಪರ್ಕ, ವಿಮಾ ಬ್ಯಾಂಕ್ ಸೇರಿ ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ನಿಲ್ಲಿಸಬೇಕು ಎಂದು ಆಗ್ರಹಿಸಿದರು.