ರಾಯಚೂರು :ಬಿಜೆಪಿಯಿಂದ ಸರ್ಟಿಫಿಕೇಟ್ ಪಡೆಯಲು ನಾನು ಗ್ರಾಮ ವಾಸ್ತವ್ಯ ಮತ್ತು ಜನತಾ ದರ್ಶನ ಕಾರ್ಯಕ್ರಮ ಮಾಡುತ್ತಿಲ್ಲ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ.
ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ಕರೇಗುಡ್ಡ ಗ್ರಾಮದ ಗ್ರಾಮ ವಾಸ್ತವ್ಯದಲ್ಲಿದ್ದ ಕುಮಾರಸ್ವಾಮಿ ಜನತಾ ದರ್ಶನದ ಬಳಿಕ ಮಾತನಾಡಿ, ಯಾರನ್ನೋ ಮೆಚ್ಚಿಸಲು ಅಥವಾ ಅವರಿಂದ ಸರ್ಟಿಫಿಕೇಟ್ ಪಡೆಯಲು ಈ ಕಾರ್ಯಕ್ರಮ ಮಾಡುತ್ತಿಲ್ಲ. ಜನರ ಸಮಸ್ಯೆ ಪರಿಹಾರಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿದೆ ಎಂದರು.
ಈಗಿನ ಆಧುನಿಕತೆ ಯುಗದಲ್ಲಿ ವಿಧಾನಸೌಧದಲ್ಲಿ ಕುಳಿತು ಕೆಲಸ ಮಾಡಬಹುದು ಎಂಬ ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಕುಮಾರಸ್ವಾಮಿ, ನಾನು ಹಳ್ಳಿಯಿಂದ ಬಂದವನು, ಬಿಎಸ್‌ವೈ ಅವರಷ್ಟು ನೈಪುಣ್ಯತೆ ಇಲ್ಲ. ಜನರ ಬಳಿ ತೆರಳಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ಸಾರ್ವಜನಿಕರಿಂದ ಸಲ್ಲಿಕೆಯಾದ ಸಾವಿರಾರು ಅಹವಾಲುಗಳಿಗೆ 15 ದಿನದಲ್ಲಿ ಪರಿಹಾರ ನೀಡುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು. ಸರ್ಕಾರ ಜನಸ್ನೇಹಿಯಾಗಿದೆ. ಸಮಸ್ಯೆಗೆ ಸ್ಪಂದಿಸುತ್ತಾರೆ ಎನ್ನುವ ವಿಶ್ವಾಸ ಮೂಡಿಸುವ ಕೆಲಸವನ್ನು ಅಧಿಕಾರಿ ವರ್ಗ ಮಾಡಬೇಕು. ನೀರಾವರಿ ಇಲಾಖೆ ಭೂಸ್ವಾಧೀನ ಮಾಡಿಕೊಂಡು ಹಣ ನೀಡದಿರುವ ಪ್ರಕರಣಗಳು ಕಂಡು ಬಂದಿದ್ದು ಇದರ ಬಗ್ಗೆ ಕ್ರಮ ಜರುಗಿಸುವುದಾಗಿ ತಿಳಿಸಿದರು.