ರಾಯಚೂರು: ಸಂವಿಧಾನ ಶಿಲ್ಪಿ ಹಾಗೂ ಭಾರತರತ್ನ ಡಾ. ಬಿ.ಅರ್.ಅಂಬೇಡ್ಕರ್ ಅವರ ಬಗ್ಗೆ ನನಗೆ ಅಪಾರ ಗೌರವ ಮತ್ತು ಅಭಿಮಾನ ಇದೆ ಎಂದು ರಾಯಚೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಲ್ಲಿಕಾರ್ಜುನಗೌಡ ಅವರು ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಪ್ರತಿ ವರ್ಷ ನವೆಂಬರ್ 26 ರಂದು ಸಂವಿಧಾನ ದಿನ ಆಚರಣೆ ಮಾಡುತ್ತಾ ಬಂದಿದ್ದು, ಆ ಸಮಯದಲ್ಲಿ ನಾನು ಅಂತಹ ಮಹಾನ್ ವ್ಯಕ್ತಿತ್ವ, ತತ್ವ, ಆದರ್ಶ ಮತ್ತು ನಡೆ ನುಡಿಗಳನ್ನು ಪ್ರತಿಯೊಬ್ಬರು ತಮ್ಮಜೀವನದಲ್ಲಿ ರೂಢಿಸಿಕೊಳ್ಳಬೇಕು ಅಂತಾ ವಿನಂತಿಸಿಕೊಂಡಿರುತ್ತೇನೆ. ಅಂತಹ ಮಹಾನ್ ವ್ಯಕ್ತಿಗೆ ನಾನು ಯಾವತ್ತೂ ಅಗೌರವ ತೋರಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನನ್ನ ಬಗ್ಗೆ ಯಾವ ಉದ್ದೇಶ ಇಟ್ಟುಕೊಂಡು ಆ ರೀತಿ ಅಪಪ್ರಚಾರ ಮಾಡಿದ್ದಾರೆ ಅಂತಾ ನನಗೆ ತಿಳಿಯದಾಗಿದೆ. ಕಾರಣ ಆ ವದಂತಿ ಸುಳ್ಳಾಗಿದ್ದು, ಅದನ್ನು ನಂಬಬೇಡಿ ಅಂತಾ ಎಲ್ಲರಲ್ಲಿ ವಿನಂತಿಸಿಕೊಳ್ಳುತ್ತೇನೆ ಎಂದು ಮನವಿ ಮಾಡಿದ್ದಾರೆ.
ಹೇಳಿಕೆಯಲ್ಲಿ ಏನಿದೆ?ಜ.26ರಂದು(ಬುಧವಾರ)ಬೆಳಗ್ಗೆ 8:30ಕ್ಕೆ ನಮ್ಮ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಮಾನ್ಯ ಉಚ್ಚ ನ್ಯಾಯಾಲಯದವರು ನೀಡಿದ ಎಸ್.ಒ.ಪಿ. ಪ್ರಕಾರ ನ್ಯಾಯಾಧೀಶರು, ನ್ಯಾಯಾಲಯದ ಸಿಬ್ಬಂದಿ, ವಕೀಲರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಒಟ್ಟು 200 ಜನರಿಗೆ ಮೀರದಂತೆ ಸೇರಿ ಗಣರಾಜ್ಯೋತ್ಸವ ಆಚರಿಸಲು ನಿರ್ಣಯಿಸಿ ನೋಟಿಸು ನೀಡಲಾಗಿತ್ತು. ಆದರೆ, ಜ.26ರಂದು ಮುಂಜಾನೆ 8.15ರ ಸುಮಾರಿಗೆ ನಮ್ಮ ಸಿಬ್ಬಂದಿ ನನ್ನ ಕೊಠಡಿಗೆ ಬಂದು ಕೆಲವು ವಕೀಲರು ಮಹಾತ್ಮ ಗಾಂಧೀಜಿಯವರ ಫೋಟೋದ ಜೊತೆ ಡಾ.ಬಿ.ಆರ್. ಅಂಬೇಡ್ಕರ ಅವರ ಫೋಟೋವನ್ನು ಸಹ ಇಟ್ಟು ಗಣರಾಜ್ಯೋತ್ಸವ ಆಚರಿಸಬೇಕೆಂದು ಹಾಗೂ ಸರ್ಕಾರದ ಸುತ್ತೋಲೆ ಇದೆ.