ರಾಯಚೂರು:ರಾಜ್ಯದಲ್ಲಿ ಬಾಲ್ಯ ವಿವಾಹ ಪದ್ದತಿಯನ್ನು ನಿಷೇಧಿಸಲಾಗಿದ್ದರೂ ಕದ್ದು ಮುಚ್ಚಿ ಬಾಲ್ಯ ವಿವಾಹ ನಡೆಯುತ್ತಿವೆ. ಜಿಲ್ಲೆಯ ಸಿಂಧನೂರು ಗ್ರಾಮೀಣ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣವೇ ಇದಕ್ಕೆ ಸಾಕ್ಷಿಯಾಗಿದ್ದು, ಬಾಲ್ಯವಿವಾಹ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಸಿಂಧನೂರು ತಾಲೂಕಿನ ವಿರುಪಾಪುರ ಗ್ರಾಮದ ಬಳಿ ಇರುವ ಹಟ್ಟಿ ಗ್ರಾಮದಲ್ಲಿ, ಕಳೆದ ಮಾರ್ಚ್ 19 ರಂದು ಖಾದರಬಾಷಾ ಪಟೇಲನ ಅಪ್ರಾಪ್ತ ಮಗಳನ್ನು, ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದ ಯಮರನೂರು ಸಾಬ್ ಮಗನಿಗೆ ವಿವಾಹ ಮಾಡಿಕೊಟ್ಟಿದ್ದಾರೆ. ಆದರೆ ಈ ಪ್ರಕರಣ ಅಂದು ಪತ್ತೆಯಾಗದೆ, ಬಾಲಕಿ ಗರ್ಭಿಣಿಯಾದ ಬಳಿಕ ತಡವಾಗಿ ಬೆಳಕಿಗೆ ಬಂದಿದೆ. ಗರ್ಭಿಣಿಯಾದ ಬಾಲಕಿಯನ್ನು ಕೊಪ್ಪಳ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋಗಲಾಗಿದೆ. ಅಲ್ಲಿಯ ವೈದ್ಯರು ಈಕೆ ಬಾಲಕಿ ಇರಬಹುದು ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ. ಆಗ ಬಾಲಕಿಯ ಹುಟ್ಟಿದ ದಿನಾಂಕವನ್ನು ಕೇಳಿ ಕೂಡಲೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.