ರಾಯಚೂರು: ರಾಜ್ಯದ ಪ್ರತೀ ಜಿಲ್ಲೆಗೆ ಜಿಲ್ಲಾಧಿಕಾರಿಯನ್ನು ನಿಯೋಜಿಸಿ ಸಾರ್ವಜನಿಕ ಸೇವೆಯನ್ನು ಸಮರ್ಪಕವಾಗಿ ಒದಗಿಸುವ ಕಾರ್ಯವನ್ನು ಸರ್ಕಾರ ಮಾಡಬೇಕು. ಆದ್ರೆ ರಾಯಚೂರು ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಹುದ್ದೆ ಖಾಲಿಯಿದೆ. ಜಿಲ್ಲಾ ಪಂಚಾಯತ್ ಸಿಇಒ ಅವರೇ ಸದ್ಯ ಆಡಳಿತ ನಿಭಾಯಿಸಿಕೊಂಡು ಹೋಗುತ್ತಿದ್ದಾರೆ. ಇದರ ಪರಿಣಾಮ, ಆಡಳಿತ ಹಳ್ಳ ಹಿಡಿದಿದೆ ಎನ್ನುವ ಆರೋಪಗಳು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.
ಕೆಲ ತಿಂಗಳ ಹಿಂದೆ ನಡೆದ ಐಎಎಸ್ ಅಧಿಕಾರಿಗಳ ವರ್ಗಾವಣೆಯಲ್ಲಿ, ರಾಯಚೂರು ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಡಾ.ಬಿ.ಸಿ.ಸತೀಶ್ ಅವರನ್ನು ಕೊಡಗು ಜಿಲ್ಲಾಧಿಕಾರಿಯಾಗಿ ನಿಯೋಜನೆ ಮಾಡಲಾಯಿತು. ಕೊಡಗು ಜಿಲ್ಲಾಧಿಕಾರಿಯಾಗಿದ್ದ ಚಾರುಲತಾ ಸೋಮಲ್ ಅವರನ್ನು ರಾಯಚೂರು ಜಿಲ್ಲಾಧಿಕಾರಿಯನ್ನಾಗಿ ನಿಯೋಜನೆ ಮಾಡಲಾಯಿತು.
ಆದ್ರೆ ಡಾ.ಬಿ.ಸಿ.ಸತೀಶ್ ಕೊಡಗು ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದು, ರಾಯಚೂರು ಜಿಲ್ಲಾಧಿಕಾರಿ ಮಾತ್ರ ಅಧಿಕಾರ ಸ್ವೀಕರಿಸಿಲ್ಲ. ಇದರಿಂದ ಜಿಲ್ಲಾಧಿಕಾರಿ ಹುದ್ದೆ ಖಾಲಿಯಿದೆ. ಜಿಲ್ಲಾ ಪಂಚಾಯತ್ ಸಿಇಒ ಅವರೇ ಆಡಳಿತ ನಿಭಾಯಿಸಿಕೊಂಡು ಹೋಗುತ್ತಿದ್ದಾರೆ.