ರಾಯಚೂರು : ಮೋದಿ ಬರುವ ಮುಂಚೆ ದೇಶದಲ್ಲಿ ಭಯೋತ್ಪಾದನೆ ಹೆಚ್ಚಾಗಿತ್ತು. ಎಲ್ಲೆಂದರಲ್ಲಿ ಬಾಂಬ್ ಸ್ಫೋಟ ನಡೆಯುತ್ತಿತ್ತು. ಎಲ್ಲೆಂದರಲ್ಲಿ ಗುಂಡಿನ ದಾಳಿ ನಡೆಯುತ್ತಿತ್ತು. ಆದರೆ, ನರೇಂದ್ರ ಮೋದಿ ಅವರು ಬಂದ ಮೇಲೆ ಈಗ ಎಲ್ಲಿಯೇ ಬಾಂಬ್ ಹಾಕಿದರೂ ಪಾಕಿಸ್ತಾನಕ್ಕೆ ನುಗ್ಗಿ ಹೊಡೆಯುವ ಸ್ವಾತಂತ್ರ್ಯ ಯೋಧರಿಗೆ ಕೊಟ್ಟಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಜಿಲ್ಲೆಯ ದೇವದುರ್ಗ ಪಟ್ಟಣದಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. ಭಾರತ ಪಾಕಿಸ್ತಾನಕ್ಕೆ ನುಗ್ಗಿ ಹೊಡೆದಾಗ ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ಅವರು ದಾಖಲೆಗಳನ್ನು ಕೊಡಿ ಎಂದು ಕೇಳಿದ್ದರು. ಆದರೆ, ಪಾಕಿಸ್ತಾನವೇ ನಮ್ಮ ಮೇಲೆ ಭಾರತ ದಾಳಿ ಮಾಡಿದೆ ಎಂದು ಹೇಳಿದರೂ ಇವರು ದಾಖಲೆಗಳನ್ನು ಕೇಳುತ್ತಿದ್ದಾರೆ. ನಮ್ಮ ಸೈನಿಕರು ಹೇಳಿದ ಮೇಲೆ ನಾವು ಅದನ್ನೂ ನಂಬುತ್ತೇವೆ ಎಂದು ಜೋಶಿ ಹೇಳಿದರು.
ಕಾಂಗ್ರೆಸ್ನಿಂದ ಸುಳ್ಳು ಭರವಸೆ- ಜೋಶಿ ಆರೋಪ:ಇನ್ನು ಕಾಂಗ್ರೆಸ್ ಉಚಿತ ವಿದ್ಯುತ್ ನೀಡುವ ಬಗ್ಗೆ ಹೇಳುತ್ತಿದ್ದಾರೆ. 200 ಯುನಿಟ್ ವಿದ್ಯುತ್ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಕಾಂಗ್ರೆಸ್ ಉಚಿತ ಮತ್ತು ಖಚಿತ ಎಂದು ಅನೇಕ ಉಚಿತ ಯೋಜನೆಗಳನ್ನು ನೀಡುವುದಾಗಿ ಹೇಳುತ್ತಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ವಿದ್ಯುತ್ ನೀಡಲಿಲ್ಲ. ವಿದ್ಯುತ್ ಉತ್ಪಾದನೆ ಮಾಡುವ ತಾಕತ್ತೂ ಕೂಡ ಕಾಂಗ್ರೆಸ್ಗೆ ಇರಲಿಲ್ಲ. 2013ರಿಂದ 2018ರವೆರೆಗೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದರು. ಆಗ ಯಾಕೆ ವಿದ್ಯುತ್ ಉಚಿತವಾಗಿ ಕೊಡಲಿಲ್ಲ ಎಂದು ಸಿದ್ದರಾಮಯ್ಯಗೆ ಪ್ರಶ್ನೆ ಮಾಡಿದರು. ಕಾಂಗ್ರೆಸ್ ಸುಳ್ಳು ಆಶ್ವಾಸನೆಗಳನ್ನು ನೀಡುತ್ತಿದೆ. ಈ ಮೂಲಕ ಬಡವರಿಗೆ ದಾರಿ ತಪ್ಪಿಸುವ ಕಾರ್ಯವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಆರೋಪಿಸಿದರು.