ದೇವದುರ್ಗ:ಜೆಡಿಎಸ್ ಶಾಸಕಿ ಕರೇಮ್ಮ ನಾಯಕ್‌ಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ ಆರೋಪದ ಮೇಲೆ 8 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ದೇವದುರ್ಗ ತಾಲೂಕಿನ ಆಲದಮರ ತಾಂಡಾದಲ್ಲಿ ಕರ್ತವ್ಯ ನಿರತ ಲೈನ್‌ಮ್ಯಾನ್ ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದರು. ಘಟನೆ ನಂತರ ಗ್ರಾಮಸ್ಥರು ರಸ್ತೆ ತಡೆ ನಡೆಸಿ, ಟೈರ್ ಸುಟ್ಟು ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೇ ಸ್ಥಳಕ್ಕೆ ಶಾಸಕಿ ಕರೆಮ್ಮ ಭೇಟಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ವಿಷಯ ತಿಳಿದು ಘಟನಾ ಸ್ಥಳಕ್ಕೆ ಶಾಸಕಿ ಭೇಟಿ ನೀಡಿದ್ದಾರೆ.
ಈ ವೇಳೆ ಪ್ರತಿಭಟನಕಾರರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಲ್ಲದೇ ಕೈ ಹಿಡಿದು ಎಳೆದಾಡಿ, ಬೆದರಿಕೆ ಹಾಕಿ ಜೆಡಿಎಸ್ ಕಾರ್ಯಕರ್ತರ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಒಟ್ಟು 8 ಜನರ ವಿರುದ್ಧ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಶಾಸಕಿಗೆ ಬೆದರಿಕೆ ಹಾಕಿದ ಆರೋಪದಡಿ ದೇವದುರ್ಗ ಪೊಲೀಸ್ ಠಾಣೆ ಮುಂದೆ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿದ್ದಾರೆ.
ಭಾನುವಾರದಂದು ವಿದ್ಯುತ್ ಕಂಬದ ದುರಸ್ತಿ ವೇಳೆ ವಿದ್ಯುತ್ ಪ್ರವಹಿಸಿ ಕಂಬದ ಮೇಲೆಯೆ ಲೈನ್‌ಮ್ಯಾನ್ ವೀರುಪಾಕ್ಷಿ (27) ಮೃತಪಟ್ಟಿದ್ದರು. ಸಿರವಾರ ತಾಲೂಕಿನ ಕವಿತಾಳ ಪಟ್ಟಣ ನಿವಾಸಿ ವಿರೂಪಾಕ್ಷಿ ಕರ್ತವ್ಯ ನಿಮಿತ್ತ ಕ್ಯಾದಿಗೇರಾ ಹಾಗೂ ಜಾಗಟಗಲ್ ನಡುವೆ ವಿದ್ಯುತ್ ಕಂಬ ದುರಸ್ತಿ ಕಾರ್ಯಕ್ಕೆ ಎಂದು ತೆರಳಿದ್ದರು. ಅರಕೇರಿ ತಾಲೂಕಿನ ಅರಕೇರಿ ಜೆಸ್ಕಾಂ ಶಾಖೆಯ ಲೈನ್‌ಮ್ಯಾನ್ ಆಗಿ ವಿರುಪಾಕ್ಷಿ ಕಾರ್ಯನಿರ್ವಹಿಸುತ್ತಿದ್ದರು.
ಕಲುಷಿತ ನೀರು ಸೇವಿಸಿ ವೃದ್ದೆ ಸಾವು, ಗಂಗಾವತಿ:ಇನ್ನು ಕಲುಷಿತ ನೀರು ಸೇವಿಸಿ ವೃದ್ಧೆ ಸಾವನ್ನಪ್ಪಿರುವ ಘಟನೆ ಕನಕಗಿರಿ ತಾಲೂಕಿನ ಬಸರಿಹಾಳ ಗ್ರಾಮದಲ್ಲಿ ನಡೆದಿದೆ. ಹೊನ್ನಮ್ಮ ಶಿವಪ್ಪ (65) ಎಂಬ ಮಹಿಳೆ ಸಾವನ್ನಪ್ಪಿದ್ದು, 15 ಜನರು ಅಸ್ವಸ್ಥರಾಗಿದ್ದಾರೆ. ಅಸ್ವಸ್ಥರನ್ನು ಗಂಗಾವತಿಯ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ.