ರಾಯಚೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಐದು ತಿಂಗಳು ಆಗಿಲ್ಲ. ಆಗಲೇ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಸಚಿವರ ನಡುವೆ ವೈಮನಸ್ಸು ಶುರುವಾಗಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ, ಶಿಕಾರಿಪುರ ಶಾಸಕ ಬಿ ವೈ ವಿಜಯೇಂದ್ರ ಹೇಳಿದ್ದಾರೆ.
ರಾಯಚೂರು ಜಿಲ್ಲೆಯ ಲಿಂಗಸುಗೂರು ಪಟ್ಟಣದಲ್ಲಿ ರಂಭಾಪುರಿ ಪೀಠದ ಜಗದ್ಗುರುಗಳು ನಡೆಸುತ್ತಿರುವ ದಸರಾ ಧರ್ಮ ಸಮ್ಮೇಳದಲ್ಲಿ ಭಾಗವಹಿಸಿ, ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದಲ್ಲಿ ವೈಮನಸ್ಸು ಹೆಚ್ಚಾಗಿದೆ. ಶಾಸಕ, ಸಚಿವರಲ್ಲಿಯೂ ಸಹ ಅಸಮಾಧಾನ ಇದೆ. ಸರ್ಕಾರ ಶಾಸಕರಿಗೆ ಒಂದು ರೂಪಾಯಿ ಅನುದಾನ ಕೊಡಲು ಸಾಧ್ಯವಾಗುತ್ತಿಲ್ಲ. ಎಲ್ಲದಕ್ಕೂ ಗ್ಯಾರೆಂಟಿ ಯೋಜನೆ ಕಾರಣ ಕೊಡುತ್ತಿದ್ದಾರೆ. ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ಎದುರಾಗಿ ರೈತರು ಪರದಾಡುತ್ತಿದ್ದಾರೆ. ಬರಗಾಲದ ಪರಿಸ್ಥಿತಿ ತಾಂಡವಾಡುತ್ತಿದೆ. ವಿದ್ಯುತ್ ಸಮಸ್ಯೆ ಹೆಚ್ಚಾಗುತ್ತಿದೆ. ರೈತರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಹ ಈ ಸರ್ಕಾರಕ್ಕೆ ಗೊತ್ತಾಗುತ್ತಿಲ್ಲ. ರೈತರ ಬಗ್ಗೆ ಕಾಳಜಿ ಇಲ್ಲದ ಸರ್ಕಾರ. ಬರಗಾಲ ಸಂದರ್ಭದಲ್ಲಿ ಕೂಡ ಹೀಗೆ ನಡೆದುಕೊಳ್ಳುತ್ತಿರುವುದು ದುರಾದೃಷ್ಟಕರ ಸಂಗತಿ. ಬರಗಾಲದಿಂದ ರಾಜ್ಯದ ಜನತೆ ನರಳುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸಚಿವರುಗಳಿಗೆ ಹೊಸ ಕಾರ್ ಖರೀದಿ ಬೇಕೆ? ಎಂದು ಪ್ರಶ್ನಿಸಿದರು.
ಮಾಜಿ ಶಾಸಕಿ ಪೂರ್ಣಿಮಾ ಕಾಂಗ್ರೆಸ್ ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಬಿಜೆಪಿ ಕಾರ್ಯಕರ್ತರ ಶಕ್ತಿ ಮೇಲೆ ನಿಂತಿರುವ ಪಕ್ಷ. ಯಾರೋ ಒಂದಿಬ್ಬರು ಮಾಜಿ ಶಾಸಕರು ಹೋದ್ರೆ ಪಕ್ಷಕ್ಕೆ ಹಿನ್ನೆಡೆ ಆಗಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಹಿನ್ನೆಡೆಯಾಗಿದೆ ಎನ್ನುವುದು ನಿಜ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ, ಅತಿ ಹೆಚ್ಚು ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವ ಮೂಲಕ, ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.
ಇನ್ನೂ ಸಚಿವ ಎಂ.ಬಿ ಪಾಟೀಲ್ ಮಾತನಾಡಿ, ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಅವರು ಬಹಳ ದೊಡ್ಡ ಮೇಧಾವಿ. ಅವರ ಹೇಳಿಕೆಗಳಿಗೆ ನಾನು ಉತ್ತರಿಸುವುದಿಲ್ಲ ಎಂದು ವ್ಯಂಗ್ಯವಾಡಿದರು. ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ವಿರುದ್ಧ ಇರುವ ಆರೋಪಗಳಿಗೆ ಪ್ರತಿಕ್ರಿಯಿಸಿ, ಅವರು ಪರಿಶುದ್ಧ ವ್ಯಕ್ತಿ. ಬದ್ಧತೆ ಹೊಂದಿದ್ದಾರೆ. ಈ ಪ್ರಕರಣವನ್ನು ಸಿಐಡಿಗೆ ವಹಿಸುವುದು ಅವಶ್ಯವಿರಲಿಲ್ಲ. ಆದರೂ ನಮ್ಮ ಸರ್ಕಾರ ಸಿಐಡಿ ತನಿಖೆಗೆ ನೀಡಿದೆ. ಈಶ್ವರಪ್ಪನವರ ಕೇಸ್ ಬೇರೆ, ಸಚಿವ ಶರಣಪ್ರಕಾಶ್ ಪಾಟೀಲ್ ಅವರ ಕೇಸ್ ಬೇರೆ. ಶರಣಪ್ರಕಾಶ್ ಪಾಟೀಲ್ ಪ್ರಾಮಾಣಿಕ ನಾಯಕ ಎಂದು ಸ್ಪಷ್ಟಪಡಿಸಿದರು.