ರಾಯಚೂರು:ರಾಜ್ಯದಲ್ಲಿ 17 ವಿಧಾನಸಭಾ ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯಬೇಕಾಗಿತ್ತು. ಆದರೆ ಚುನಾವಣೆ ಆಯೋಗ 17 ಕ್ಷೇತ್ರಗಳ ಪೈಕಿ, 15 ವಿಧಾನಸಭಾ ಕ್ಷೇತ್ರಗಳಿಗೆ ಮಾತ್ರ ಉಪ ಚುನಾವಣೆ ಮೂಹರ್ತ ಫಿಕ್ಸ್ ಮಾಡಿದ್ದು, ಜಿಲ್ಲೆಯ ಪರಿಶಿಷ್ಟ ಪಂಗಡಕ್ಕೆ ಮೀಸಲು ಕ್ಷೇತ್ರ ಮಸ್ಕಿಯನ್ನು ಚುನಾವಣಾ ದಿನಾಂಕ ಘೋಷಣೆ ಮಾಡದಿರುವುದು ಕುತೂಹಲ ಕೆರಳಿಸಿದೆ.
ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದ ಪ್ರತಾಪ್ ಗೌಡ ಪಾಟೀಲ್, ಮೊದಲ ಬಾರಿಗೆ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ರೆ, ಎರಡನೇ ಹಾಗೂ ಮೂರನೇಯ ಬಾರಿಗೆ ಕಾಂಗ್ರೆಸ್ನಿಂದ ಸ್ಪರ್ಧೆ ಮಾಡಿ ಗೆಲುವು ಸಾಧಿಸಿದ್ರು. ಆದ್ರೆ ಮೈತ್ರಿ ಸರ್ಕಾರ ಹಿರಿಯ ಶಾಸಕರನ್ನ ಕಡೆಗಣಿಸಿದೆ ಎಂದು 16 ಶಾಸಕರ ಜೊತೆ ಮಸ್ಕಿ ಶಾಸಕರು ಸೇರಿಕೊಂಡು, ಅತೃಪ್ತ ಶಾಸಕರ ಗುಂಪಿನಲ್ಲಿ ಗುರುತಿಸಿಕೊಂಡರು. ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಪಕ್ಷ ವಿರೋಧಿ ಚಟುವಟಿಕೆ ಆಧಾರದ ಮಸ್ಕಿ ಕ್ಷೇತ್ರದ ಶಾಸಕ ಸೇರಿದಂತೆ 17 ಜನರನ್ನು ಅನರ್ಹಗೊಳಿಸಿದ್ರು. ಇದನ್ನ ಪ್ರಶ್ನಿಸಿ ಅನರ್ಹ ಶಾಸಕರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಚುನಾವಣೆ ಆಯೋಗ 17 ಕ್ಷೇತ್ರಗಳ ಪೈಕಿ, 15 ಕ್ಷೇತ್ರಗಳಿಗೆ ಚುನಾವಣೆ ದಿನಾಂಕ ಘೋಷಣೆ ಮಾಡಿದೆ. ಇದರಲ್ಲಿ ಮಸ್ಕಿ ಕ್ಷೇತ್ರದ ಉಪ ಚುನಾವಣೆ ಕೈಬಿಟ್ಟಿರುವುದು ಕ್ಷೇತ್ರದಲ್ಲಿ ಹಾಗೂ ಅನರ್ಹ ಶಾಸಕರಲ್ಲಿ ಆತಂಕ ಸೃಷ್ಟಿಸಿದೆ.