ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿಕೆ ರಾಯಚೂರು :ಬೆಂಗಳೂರಿನಲ್ಲಿ ನಡೆದ ಆದಾಯ ತೆರಿಗೆ ಇಲಾಖೆ(ಐಟಿ) ದಾಳಿ ಸಂದರ್ಭದಲ್ಲಿ ಸಿಕ್ಕಿರುವ ಹಣದ ಬಗ್ಗೆ ಸೂಕ್ತ ತನಿಖೆ ಮಾಡಬೇಕು ಎಂದು ಮಾಜಿ ಸಿಎಂ, ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಒತ್ತಾಯಿಸಿದ್ದಾರೆ.
ಲಿಂಗಸೂಗೂರು ಪಟ್ಟಣದಲ್ಲಿ ಬಾಳೆಹೊನ್ನೂರಿನ ರಂಭಾಪುರಿ ಪೀಠದ ಜಗದ್ಗುರುಗಳಿಂದ ನಡೆಯುವ ದಸರಾ ದರ್ಬಾರ್ ಕಾರ್ಯಕ್ರಮ ಉದ್ಘಾಟಿಸಲು ಆಗಮಿಸುವ ಮುನ್ನ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ಪಂಚ ರಾಜ್ಯಗಳ ಚುನಾವಣೆ ಹಾಗೂ ಲೋಕಸಭಾ ಚುನಾವಣೆಗೆ ಸಾವಿರ ಕೋಟಿ ಹಣ ಸಂಗ್ರಹವಾಗಿದೆ ಎಂದು ಕೇಂದ್ರ ಸಚಿವ ಪ್ರಾಹ್ಲದ್ ಜೋಶಿ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಜೋಶಿ ಅವರು ಹಿರಿಯ ನಾಯಕರು. ಸರ್ಕಾರ ಹಣ ಸಂಗ್ರಹದಲ್ಲಿ ಯಾವ ರೀತಿ ತೊಡಗಿದೆ ಅನ್ನೋದನ್ನು ಹೇಳಿದ್ದಾರೆ ಎಂದು ತಿಳಿಸಿದರು.
ರಾಜ್ಯದಲ್ಲಿ ಒಂದಾದ ಮೇಲೊಂದರಂತೆ ಹಗರಣಗಳು ಬಯಲಿಗೆ ಬರುತ್ತಿವೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಇವುಗಳ ಬಗ್ಗೆ ಕ್ರಮ ಕೈಗೊಳ್ಳದೇ ಇರುವುದು ದುರದೃಷ್ಟಕರ. ಐಟಿ ದಾಳಿಯಲ್ಲಿ ಸಾಕಷ್ಟು ಹಣ ಸಿಕ್ಕಿದೆ. ದಸರಾ ಕಲಾವಿದರಿಂದಲೂ ಸಹ ಲಂಚ ಕೇಳುವ ಕೀಳುಮಟ್ಟಕ್ಕೆ ಸರ್ಕಾರ ಬಂದಿದೆ ಎಂದು ಟೀಕಿಸಿದರು.
ರಾಜ್ಯದಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆಯಿಂದಾಗಿ ಜನ ಸಂಕಷ್ಟದಲ್ಲಿದ್ದಾರೆ. ಸರ್ಕಾರ ಜನಹಿತ ಮರೆತಿದೆ. ಬೇರೆ ಕಡೆಯಿಂದ ವಿದ್ಯುತ್ ಖರೀದಿಸಿ ಸಮಸ್ಯೆ ಸರಿದೂಗಿಸಬೇಕು. ಆದರೆ ಈ ನಿಟ್ಟಿನಲ್ಲಿ ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ನಮ್ಮ ಅವಧಿಯಲ್ಲಿ ವಿದ್ಯುತ್ ಹೆಚ್ಚುವರಿಯಾಗಿ ಖರೀದಿ ಮಾಡಿ ಸಮಸ್ಯೆ ಪರಿಹರಿಸಿದ್ದೇವೆ. ಸರ್ಕಾರ ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದರು.
ಬರಗಾಲ ರಾಜ್ಯವನ್ನು ತಲ್ಲಣಗೊಳಿಸಿದೆ. ರೈತರಿಗೆ ಉಸಿರುಗಟ್ಟಿಸುವ ಪರಿಸ್ಥಿತಿ ಎದುರಾಗಿದೆ. ಬೆಳೆ ನಾಶವಾಗಿದೆ. ಸರ್ಕಾರ ಈವರೆಗೆ ಪರಿಹಾರ ಕೈಗೊಂಡಿಲ್ಲ. ಪ್ರತಿಯೊಬ್ಬರಿಗೂ ಪರಿಹಾರ ಕೊಡಬೇಕು. ಬರಗಾಲ ಕಾಮಗಾರಿ ಪ್ರಾರಂಭಿಸಿ ರೈತರ ಹಿತ ಕಾಪಾಡಬೇಕು. ಆದರೆ, ಪರಿಹಾರ ಕೊಡಲು ರಾಜ್ಯ ಸರ್ಕಾರ ಕೇಂದ್ರ ಸರ್ಕಾರದತ್ತ ಬೆರಳು ತೋರಿಸುತ್ತಿದೆ ಎಂದು ದೂರಿದರು.
ಗ್ಯಾರಂಟಿ ಕೊಡುತ್ತಿದ್ದೇನೆ ಎಂದು ಖಜಾನೆ ಖಾಲಿ ಮಾಡಿದ್ದಾರೆ. ಅಭಿವೃದ್ಧಿ ಕಾರ್ಯಕ್ಕೆ ಹಣವಿಲ್ಲ. ನೀರಾವರಿ, ರಸ್ತೆ ಯೋಜನೆಗಳಿಗೆ ಹಣ ಇಲ್ಲ. ಸರ್ಕಾರ ದಿವಾಳಿಯಾಗಿದೆ ಅಂತ ಅವರೇ ಒಪ್ಪಿಕೊಂಡಿದ್ದಾರೆ. ಹಣ ಪಾವತಿಯಾಗದ ಹಿನ್ನೆಲೆಯಲ್ಲಿ ಗುತ್ತಿಗೆದಾರರು ಯಾರೂ ಮುಂದೆ ಬರುತ್ತಿಲ್ಲ.
ರಾಜ್ಯದಲ್ಲಿ ಗೊಂದಲಮಯ ವಾತಾವರಣ ನಿರ್ಮಾಣವಾಗಿದೆ. ಗುತ್ತಿಗೆದಾರರ ಸಂಘದ ಅಧ್ಯಕ್ಷ ನಮ್ಮ ಅವಧಿಯಲ್ಲೂ ಆರೋಪ ಮಾಡಿದ್ದರು. ಈಗಲೂ ನೇರವಾಗಿ ಆರೋಪ ಮಾಡ್ತಿದ್ದಾರೆ. ಕೆಲಸ ಕಾರ್ಯ ನಿಲ್ಲಿಸುತ್ತೇವೆ ಅಂತ ಹೇಳುತ್ತಿದ್ದಾರೆ ಎಂದು ಯಡಿಯೂರಪ್ಪ ತಿಳಿಸಿದರು.
ಇದನ್ನೂ ಓದಿ:'ಪರ್ಸಂಟೇಜ್ ಪಟಾಲಂ' ಕಸಕ್ಕೂ ಬಾಯಿ ಹಾಕಿದೆ; ಜನರ ಸಮಾಧಿ ಮೇಲೆ ಬ್ರ್ಯಾಂಡ್ ಬೆಂಗಳೂರು ಕಟ್ಟಿದರೆ ಸುಮ್ಮನೆ ಬಿಡಲ್ಲ: ಕುಮಾರಸ್ವಾಮಿ