ಲಿಂಗಸುಗೂರು: ಮಸ್ಕಿ ಕ್ಷೇತ್ರದ ಉಪಚುನಾವಣೆ ರಂಗೇರಿದೆ. ಈ ನಿಟ್ಟಿನಲ್ಲಿ ಸಿಎಂ ಯಡಿಯೂರಪ್ಪ ಅವರು ಮಠ, ಮಂದಿರ ಮತ್ತು ಧಾರ್ಮಿಕ ಕೇಂದ್ರಗಳಿಗೆ ಎಡತಾಕುತ್ತಿದ್ದಾರೆ. ಆದ್ರೆ ಭಾವೈಕ್ಯತೆಯ ಕೇಂದ್ರಗಳಲ್ಲಿ ಒಂದಾದ ಮುದಗಲ್ ಹುಸೇನಿ ಆಲಂ ದರ್ಗಾಕ್ಕೆ ಮುಖ್ಯಮಂತ್ರಿ ಭೇಟಿ ನೀಡದಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.
ಹಿಂದು, ಮುಸ್ಲಿಂ, ಕ್ರೈಸ್ತ ಸಮುದಾಯಗಳ ಪ್ರಾಬಲ್ಯಗಳ ಮಧ್ಯೆ ಭಾವೈಕ್ಯತೆ ಕೇಂದ್ರವಾಗಿ ಗುರುತಿಸಿಕೊಂಡ ಹುಸೇನಿ ಆಲಂ ದರ್ಗಾ ಭಕ್ತರ ಶ್ರದ್ಧಾ ಕೇಂದ್ರವಾಗಿದೆ. ಮುದಗಲ್ ಪಟ್ಟಣಕ್ಕೆ ಬರುವ ಪ್ರಮುಖರು ದೇವಾಲಯಗಳ ಜೊತೆ ದರ್ಗಾಕ್ಕೆ ಭೇಟಿ ನೀಡಿ ದರ್ಶನ ಪಡೆಯುವುದು ವಾಡಿಕೆ. ಆದರೆ ಇದೀಗ ರಾಜಕೀಯ ಮುಖಂಡರು ಮಸ್ಕಿ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ದೇವಸ್ಥಾನ, ಮಠಗಳಿಗೆ ತೆರಳುತ್ತಿದ್ದಾರೆ. ಆದ್ರೆ, ಹುಸೇನಿ ಆಲಂ ದರ್ಗಾದತ್ತ ಅವರು ಸುಳಿದಿಲ್ಲ.