ರಾಯಚೂರು: ಕೃಷ್ಣಾ ನದಿಯಲ್ಲಿ ಸಹೋದರರಿಬ್ಬರು ಕೊಚ್ಚಿ ಹೋಗಿರುವ ಮನಕಲಕುವ ಘಟನೆ ಜಿಲ್ಲೆಯ ದೇವದುರ್ಗ ತಾಲೂಕಿನ ಕೊಪ್ಪರ ಗ್ರಾಮದಲ್ಲಿ ನಡೆದಿದೆ. ಅಣ್ಣ ರಜಾಕ್ ಸಾಬ್ (35) ಹಾಗೂ ತಮ್ಮ ಮೌಲಾ ಸಾಬ್ (32) ಕೊಚ್ಚಿಹೋದವರು ಎಂದು ಗುರುತಿಸಲಾಗಿದೆ. ಕುಟುಂಬ ಸಮೇತ ಕೃಷ್ಣಾ ನದಿ ತೀರಕ್ಕೆ ರಜಾಕ್ ಹಾಗೂ ಮೌಲಾ ಸಾಬ್ ಕುಟುಂಬಸ್ಥರು ತೆರಳಿದ್ದರು.
ಈ ವೇಳೆ, ಕೊಚ್ಚಿ ಹೋಗುತ್ತಿದ್ದ ಸಾನಿಯಾ ಅನ್ನೋ ಬಾಲಕಿಯನ್ನು ಕೂಡಲೇ ಕುಟುಂಬಸ್ಥರು ರಕ್ಷಣೆ ಮಾಡಿದ್ದರು. ಆದರೆ, ಇದೇ ವೇಳೆಯಲ್ಲಿ ಕೈ ಕೈ ಹಿಡಿದುಕೊಂಡು ಸ್ನಾನ ಮಾಡುತ್ತಿದ್ದ ಅಣ್ಣ ತಮ್ಮ ಕೃಷ್ಣಾ ನದಿ ಪಾಲಾಗಿದ್ದಾರೆ. ಘಟನೆ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ, ದೇವದುರ್ಗ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸದ್ಯ ಇಬ್ಬರಿಗಾಗಿ ಕಾರ್ಯಾಚರಣೆ ಮುಂದುವರೆಸಿದ್ದಾರೆ.