ರಾಯಚೂರು:ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರಂಭದಲ್ಲೇ ಎಡವಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ಹೇಳಿದ್ದಾರೆ. ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಆರೋಪ ಮಾಡಿದ್ದಾರೆ.
ನೂತನವಾಗಿ ಆಯ್ಕೆಯಾಗಿರುವ ಸಿಎಂ ಬಸವರಾಜ ಬೊಮ್ಮಾಯಿ ತಮ್ಮ ಸಚಿವ ಸಂಪುಟ ರಚನೆ ಮೂಲಕ ಸಚಿವರಿಗೆ ಖಾತೆ ಹಂಚಿಕೆ ಮಾಡಿದ್ದಾರೆ. ಈ ವೇಳೆ ರಾಜ್ಯದ ಎಲ್ಲಾ ಭಾಗಕ್ಕೆ ಆದ್ಯತೆ ನೀಡಬೇಕಾಗಿತ್ತು. ಆದ್ರೆ ಕಲ್ಯಾಣ ಕರ್ನಾಟಕ ಭಾಗ ಸೇರಿದಂತೆ 13 ಜಿಲ್ಲೆಗಳ ಭಾಗದ ಶಾಸಕರಿಗೆ ಮಂತ್ರಿ ಸ್ಥಾನ ಒದಗಿಸದೆ, ಸಂಪುಟ ವಿಸ್ತರಣೆಯಲ್ಲಿ ಬೊಮ್ಮಾಯಿ ಪ್ರಾದೇಶಿಕ ಅಸಮಾನತೆ ತೋರಿದ್ದಾರೆ ಎಂದು ಅವರು ಆರೋಪಿಸಿದರು.
ಸಚಿವ ಕೆ.ಎಸ್.ಈಶ್ವರಪ್ಪ, ಆರ್ ಎಸ್ ಎಸ್ ಕಾರ್ಯಕರ್ತರ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಧ್ರುವನಾರಾಯಣ, ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವ ಈಶ್ವರಪ್ಪ ಮೊನ್ನೆ ಪ್ರಮಾಣವಚನ ಸ್ವೀಕರಿಸುವಾಗ ರಾಗ, ದ್ವೇಷ ಬಿಡುತ್ತೇವೆ ಎಂದು ಹೇಳಿದ್ದರು. ಆದ್ರೆ ಬಹಿರಂಗ ಸಮಾವೇಶದಲ್ಲಿ ತಲೆ ತೆಗೀರಿ ಅಂತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಈಶ್ವರಪ್ಪ ಅವರನ್ನ ಸಚಿವ ಸಂಪುಟದಿಂದ ಕೈ ಬಿಡಬೇಕು ಮಾಜಿ ಸಂಸದ ಒತ್ತಾಯಿಸಿದ್ರು.