ರಾಯಚೂರು: ಕಾಂಗ್ರೆಸ್ ತನ್ನ ಅಧಿಕಾರವದಿಯಲ್ಲಿ ಇದೇ ದೇಶವನ್ನು ಸರ್ವನಾಶ ಮಾಡಿದೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮಸ್ಕಿ ಉಪಚುನಾವಣೆ ವೇಳೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ.
ಜಿಲ್ಲೆಯ ಮಸ್ಕಿ ಪಟ್ಟಣದಲ್ಲಿ ಉಪಚುನಾವಣೆ ಹಿನ್ನೆಲೆಯಲ್ಲಿ ಆಯೋಜಿಸಿದ ಬೃಹತ್ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶದಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಆಡಳಿತ ಬಂದ ಬಳಿಕ ದೇಶ ಸುಧಾರಣೆ ಕಂಡಿದೆ. ಇಡೀ ಜಗತ್ತಿಗೆ ನಮ್ಮ ಪ್ರಧಾನಿ ಮೋದಿಜೀಯವರು ಮಾರ್ಗದರ್ಶನ ಮಾಡುತ್ತಿದ್ದಾರೆ. ಆದ್ರೆ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಬಗ್ಗೆ ನಾನು ಮಾತನಾಡಲ್ಲ. ಪ್ರಧಾನಿ ಮೋದಿಯನ್ನು ಟೀಕೆ ಮಾಡುವ ನೈತಿಕತೆ ಅವರಿಗೆ ಇಲ್ಲ. ಮುಂದಿನ 20 ವರ್ಷಗಳ ಕಾಲ ದೇಶದಲ್ಲಿ ಬಿಜೆಪಿ ಮುಂದುವರೆಯುತ್ತದೆ ಎಂದರು.
ಇದನ್ನು ಓದಿ:ನನ್ನ ರಕ್ತದಲ್ಲಿ ಬರೆದು ಕೊಡುವೆ, ಎಸ್ಟಿಗೆ ಮೀಸಲಾತಿ ಮಾಡೇ ತೀರುತ್ತೇವೆ: ಶ್ರೀರಾಮುಲು
ಮಸ್ಕಿ ಕ್ಷೇತ್ರದಲ್ಲಿ 6 ಜಿ.ಪಂ. ಕ್ಷೇತ್ರಗಳಿವೆ. ನಾನೇ ಪ್ರತಿಯೊಂದು ಜಿ.ಪಂ.ಗಳಿಗೆ ಬರುತ್ತೇನೆ. ನಿಮ್ಮ ಸಮಸ್ಯೆಗಳು ಕೇಳುತ್ತೇನೆ. ಕ್ಷೇತ್ರದಲ್ಲಿ ಏನೇನು ಕೆಲಸಗಳು ಆಗಬೇಕು ಅದೂ ಎಲ್ಲವೂ ಮಾಡಿಕೊಡುತ್ತೇನೆ. ನಾನು ಮಾತು ಕೊಟ್ಟಿದ್ದು, ಮಾಡೇ ಮಾಡುತ್ತೇನೆ. ಕೊಟ್ಟ ಮಾತುನ್ನು ಯಾವತ್ತು ತಪ್ಪಿಲ್ಲ. ಮಸ್ಕಿ, ಬಸವಕಲ್ಯಾಣ, ಸಿಂದಗಿಯಲ್ಲಿಯೂ ಸಹ ನಾವು ಗೆಲ್ಲುತ್ತೇವೆ. ಮುಂದಿನ ದಿನದಲ್ಲಿ ಅಭಿವೃದ್ಧಿಗೆ ನಾನು ಹೆಚ್ಚು ಒತ್ತು ನೀಡುವೆ. ನೀವೂ ಓಟು ಕೊಡುವುದು ಪ್ರತಾಪ್ ಗೌಡರಿಗೆ ಅಲ್ಲ. ಸಿಎಂ ಯಡಿಯೂರಪ್ಪಗೂ ಸಹ ಅಲ್ಲ, ಅಭಿವೃದ್ಧಿಗೆ ಮತ ನೀಡಿ ಎಂದು ಬಿಜೆಪಿ ಅಭ್ಯರ್ಥಿ ಪರ ಮತಯಾಚನೆ ಮಾಡಿದರು.
ಇದಕ್ಕೂ ಮುನ್ನ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಮಾಜಿ ಸಿಎಂ ಸಿದ್ಧರಾಮಯ್ಯ ಕಾಂಗ್ರೆಸ್ನಲ್ಲಿ ಭವಿಷ್ಯವಿಲ್ಲವೆಂದು ಗೊತ್ತಾಗಿದೆ. ಇದಕ್ಕಾಗಿ ಮುಂದಿನ ತಿಂಗಳು ಕಾಂಗ್ರೆಸ್‌ಗೆ ರಾಜೀನಾಮೆ ನೀಡಲಿದ್ದಾರೆ. ಜೆಡಿಎಸ್‌ಗೆ ಭವಿಷ್ಯ ಇಲ್ಲ ಎನ್ನುವ ಕಾರಣಕ್ಕೆ ಗುರುವಿನ ಬೆನ್ನಿಗೆ ಚೂರಿ ಹಾಕಿ ಕಾಂಗ್ರೆಸ್ ಸೇರಿದ ಸಿದ್ದರಾಮಯ್ಯ, ಈಗ ಕಾಂಗ್ರೆಸ್ನಲ್ಲಿ ಭವಿಷ್ಯ ಇಲ್ಲ ಎನ್ನುವ ಕಾರಣಕ್ಕೆ ಅದನ್ನು ತೊರೆಯಲು ನಿರ್ಧರಿಸಿದ್ದಾರೆ. ಅದಕ್ಕಾಗಿ 90 ಜತೆ ಬಟ್ಟೆ ಹೊಲಿಸಿಕೊಂಡು ಸಿದ್ಧರಾಗಿದ್ದಾರೆ ಎಂದು ಲೇವಡಿ ಮಾಡಿದರು.
ಸಮಾವೇಶದಲ್ಲಿ ಡಿಸಿಎಂಗಳಾದ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಸಚಿವರಾದ ಬಿ.ಶ್ರೀರಾಮುಲು, ಕೆ.ಎಸ್.ಈಶ್ವರಪ್ಪ, ಸೇರಿದಂತೆ ಶಾಸಕರು, ಮಾಜಿ ಶಾಸಕರು, ಮುಖಂಡರು ಭಾಗವಹಿಸಿದ್ದರು.