ರಾಯಚೂರು: ಜಿಲ್ಲೆಯಲ್ಲಿ ಮತ್ತೆ ಅಪರೇಷನ್ ಕಮಲ ಸದ್ದು ಮಾಡುತ್ತಿದೆ. ಕೈ ಮುಖಂಡರಿಬ್ಬರು ಬಿಜೆಪಿ ಸೇರುತ್ತಾರೆ ಎನ್ನುವ ಗುಸುಗುಸು ಸುದ್ದಿ ಈಗ ಬಹಿರಂಗ ಚರ್ಚೆಗೆ ಗ್ರಾಸವಾಗಿದೆ.
ಒಟ್ಟು 7 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಜಿಲ್ಲೆಯಲ್ಲಿ ಕಾಂಗ್ರೆಸ್ನ ಮೂವರು ಶಾಸಕರಾಗಿ ಆರಿಸಿ ಬಂದರೆ ಬಿಜೆಪಿ ಹಾಗೂ ಜೆಡಿಎಸ್ನ ತಲಾ ಇಬ್ಬರು ಶಾಸಕರು ಗೆದ್ದು ಬಂದಿದ್ದಾರೆ. ಇದೀಗ ಕಾಂಗ್ರೆಸ್ನ ಮೂವರ ಪೈಕಿಯಲ್ಲಿ ಮಸ್ಕಿ ವಿಧಾನಸಭಾ ಕ್ಷೇತ್ರದ ಶಾಸಕ ಪ್ರತಾಪ್ಗೌಡ ಪಾಟೀಲ್ ಮತ್ತು ಗ್ರಾಮೀಣ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್ ಮತ್ತೇ ಬಿಜೆಪಿ ಸೇರುತ್ತಾರೆ ಎನ್ನುವ ಬಿಸಿ ಬಿಸಿ ಚರ್ಚೆಗಳು ಕೇಳಿ ಬರುತ್ತಿವೆ. ಈ ಇಬ್ಬರನ್ನೂ ಸೆಳೆಯಲು ಬಿಜೆಪಿ ಈ ಹಿಂದೆಯೂ ಕಸರತ್ತು ನಡೆಸಿತ್ತು. ಇದೀಗ ಮತ್ತೇ ಅದೇ ಹರಸಾಹಸಕ್ಕೆ ಕೈ ಹಾಕಿದೆ ಎನ್ನುವ ಸುದ್ದಿ ಕೇಳಿಬರುತ್ತಿದೆ.
ಮತ್ತೆ ಸದ್ದು ಮಾಡುತ್ತಿರುವ ಅಪರೇಷನ್ ಕಮಲ ಮೊದಲು ಇಂತಹದ್ದೊಂದು ಸುದ್ದಿ ಹಬ್ಬುತ್ತಿದ್ದಂತೆ ಲೋಕ ಕದನಕ್ಕೂ ಮುನ್ನ ಶಾಸಕ ಬಸನಗೌಡ ದದ್ದಲ್ಗೆ ಮಹರ್ಷಿ ವಾಲ್ಮೀಕಿ ನಿಗಮ ಮಂಡಳಿ ಮತ್ತು ಪ್ರತಾಪ್ಗೌಡ ಪಾಟೀಲ್ಗೆ ಉಗ್ರಾಣ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನ ನೀಡಿ ಮೈತ್ರಿ ಸರ್ಕಾರ ಬಾಯಿ ಮುಚ್ಚಿಸಿತ್ತು. ಆದರೆ, ಲೋಕಸಭೆಯಲ್ಲಿ ಬಿಜೆಪಿ ಭಾರಿ ಬಹುಮತ ಸಾಧಿಸಿದ ಹಿನ್ನೆಲೆಯಲ್ಲಿ ಮತ್ತೆ ಅಪರೇಷನ್ಗೆ ಒಳಗಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಮಸ್ಕಿ ವಿಧಾನಸಭಾ ಕ್ಷೇತ್ರದ ಶಾಸಕ ಪ್ರತಾಪ್ಗೌಡ ಪಾಟೀಲ್ ಈ ಸುದ್ದಿಯನ್ನು ಅಲ್ಲಗಳೆದಿರುವ ಶಾಸಕ ಬಸನಗೌಡ ದದ್ದಲ್, ತಾವು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷವನ್ನು ತೊರೆಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇನ್ನು ಶಾಸಕ ಪ್ರತಾಪ್ಗೌಡ ಪಾಟೀಲ್ ಸಹ ದೂರವಾಣಿ ಮೂಲಕ ಈ ಬಗ್ಗೆ ಪ್ರತಿಕ್ರಿಯಿಸಿದ್ದು ಯಾರೂ ನನ್ನನ್ನು ಸಂಪರ್ಕ ಮಾಡಿಲ್ಲ. ನಾನು ಸಹ ಕಾಂಗ್ರೆಸ್ ಪಕ್ಷದಲ್ಲೇ ಇರುತ್ತೇನೆ ಎಂದು ಪುನರುಚ್ಚರಿಸಿದ್ದಾರೆ.