ರಾಯಚೂರು: ರಾಯಚೂರು ನಗರಸಭೆ ನೂತನ ಅಧ್ಯಕ್ಷರಾಗಿ ಲಲಿತಾ ಕಡಗೋಲು ಆಯ್ಕೆಯಾಗಿದ್ದಾರೆ ಎಂದು ಸಹಾಯಕ ಆಯುಕ್ತ/ಚುನಾವಣಾಧಿಕಾರಿ ರಜನಿಕಾಂತ್ ಘೋಷಿಸಿದ್ದಾರೆ. ನಗರಸಭೆ ಕಚೇರಿಯ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ನಿನ್ನೆ ನಡೆದ ನಗರಸಭೆ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ ಲಲಿತಾ ಕಡಗೋಲು 19 ಮತಗಳನ್ನು ಪಡೆದುಕೊಳ್ಳುವ ಮೂಲಕ ವಿಜಯಶಾಲಿಯಾಗಿದ್ದಾರೆ. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ ಸಾಜೀದ್ ಸಮೀರ್ 15 ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ ಎಂದರು.
ರಾಯಚೂರು ನಗರಸಭೆ ಅಧ್ಯಕ್ಷೆಯಾಗಿ ಬಿಜೆಪಿಯ ಲಲಿತಾ ಕಡಗೋಲು ಆಯ್ಕೆ
ರಾಯಚೂರು ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ.
ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಗೆ ಎರಡು ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಇದರಲ್ಲಿ ಕಾಂಗ್ರೆಸ್‌ನಿಂದ ಸಾಜೀದ್ ಸಮೀರ್ ಹಾಗೂ ಬಿಜೆಪಿಯಿಂದ ಲಲಿತಾ ಕಡಗೋಲು ನಾಮಪತ್ರ ಸಲ್ಲಿಸಿದ್ದರು. ಕೈ ಎತ್ತುವ ಮೂಲಕ ಮತದಾನ ನಡೆದಿದ್ದು, ಕಾಂಗ್ರೆಸ್ ಅಭ್ಯರ್ಥಿಯನ್ನು 15 ಸದಸ್ಯರು ಬೆಂಬಲಿಸಿದರೆ, ಬಿಜೆಪಿ ಅಭ್ಯರ್ಥಿಯನ್ನು 19 ಸದಸ್ಯರು ಬೆಂಬಲಿಸಿದ್ದರು. ಓರ್ವ ಸದಸ್ಯೆ ರೇಣಮ್ಮ ವಿರುದ್ಧ ಸುಳ್ಳು ಜಾತಿ ಪ್ರಮಾಣ ಆರೋಪ ಪ್ರಕರಣವಿದ್ದು ಗೌಪ್ಯ ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿತ್ತು.
ಇದನ್ನೂ ಓದಿ:ಶ್ರೀಶೈಲದಲ್ಲಿ ಘರ್ಷಣೆ: ಕರ್ನೂಲ್ ಎಸ್ಪಿ ಜೊತೆ ಮಾತನಾಡಿದ ಸಚಿವ ಮುರುಗೇಶ್ ನಿರಾಣಿ