ಕರ್ನಾಟಕ ಚುನಾವಣಾ ಉಸ್ತುವಾರಿ ಅಣ್ಣಾಮಲೈ ರಾಯಚೂರು: ರಾಯಚೂರು ಗ್ರಾಮೀಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತಿಪ್ಪರಾಜ್ ಹವಾಲ್ದಾರ್ ಅವರಿಂದು ನಾಮಪತ್ರ ಸಲ್ಲಿಸಿದರು. ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಕರ್ನಾಟಕ ಚುನಾವಣಾ ಉಸ್ತುವಾರಿ ಅಣ್ಣಾಮಲೈನೊಂದಿಗೆ ತೆರೆದ ವಾಹನದಲ್ಲಿ ಸ್ಟೇಷನ್ ರಸ್ತೆಯಿಂದ ತಹಶೀಲ್ದಾರ್ ಕಚೇರಿವರೆಗೆ ಮೆರವಣಿಗೆ ನಡೆಸಿ ಚುನಾವಣಾಧಿಕಾರಿಗೆ ಉಮೇದುವಾರಿಕೆ ಸಲ್ಲಿಸಿದರು.
ಕರ್ನಾಟಕ ಚುನಾವಣಾ ಉಸ್ತುವಾರಿ ಅಣ್ಣಾಮಲೈ ಮಾತನಾಡಿ, ಒಳ್ಳೆಯ ಜನರಿರುವ ಊರು ರಾಯಚೂರು. ರಾಯಚೂರು ಗ್ರಾಮೀಣ ಕ್ಷೇತ್ರಕ್ಕೆ ಒಳ್ಳೆಯ ಅಭ್ಯರ್ಥಿಗೆ ಟಿಕೆಟ್ ನೀಡಿದ್ದೇವೆ. ಈಗಾಗಲೇ 2013 ಮತ್ತು 2018ರ ಚುನಾವಣೆಯಲ್ಲಿ ಇವರು ಗೆಲುವು ಸಾಧಿಸಿದ್ದಾರೆ. ಶಿಕ್ಷಕ ವೃತ್ತಿಯನ್ನು ತ್ಯಜಿಸಿ ಜನರ ಸೇವೆ ಮಾಡಬೇಕು ಎಂದು ತಿಪ್ಪರಾಜ್ ಹವಾಲ್ದಾರ್ ರಾಜಕೀಯಕ್ಕೆ ಬಂದಿದ್ದಾರೆ. ಶಾಸಕರಾಗಿ ಕ್ಷೇತ್ರದಲ್ಲಿ ಅನೇಕ ಅಭಿವೃದ್ದಿ ಕೆಲಸಗಳನ್ನು ಮಾಡಿದ್ದಾರೆ. ಈ ಬಾರಿ ದಾಖಲೆಯ ಅಂತರದಲ್ಲಿ ತಿಪ್ಪರಾಜ್ ಜಯಗಳಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ದದ್ದಲ್ ಬಸವನಗೌಡ ಇಂದು ಮತ್ತೊಮ್ಮೆ ನಾಮಪತ್ರವನ್ನು ಸಲ್ಲಿಕೆ ಮಾಡಿದ್ದಾರೆ. ತಮ್ಮ ಕಾರ್ಯಕರ್ತರೊಂದಿಗೆ ನಗರದ ಬಸವೇಶ್ವರ ವೃತ್ತದ ಬಳಿಯ ವಾಲ್ ಕಟ್ ಮೈದಾನದಿಂದ ತಹಸೀಲ್ ಕಚೇರಿವರೆಗೆ ಮೆರವಣಿಗೆ ನಡೆಸಿ ಚುನಾವಣಾಧಿಕಾರಿಗೆ ತಮ್ಮ ಉಮೇದುವರಿಕೆಯನ್ನು ಸಲ್ಲಿಸಿದರು.
ಮಾನಪ್ಪ ವಜ್ಜಲ್ ನಾಮಪತ್ರ ಸಲ್ಲಿಕೆ:ಲಿಂಗಸುಗೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾನಪ್ಪ ವಜ್ಜಲ್ ಪಟ್ಟಣದಲ್ಲಿ ಬೃಹತ್ ಮೆರವಣಿಗೆ ನಡೆಸಿ ತಹಶೀಲ್ದಾರ್ ಕಚೇರಿಗೆ ತೆರಳಿ ಚುನಾವಣಾಧಿಕಾರಿಗೆ ತಮ್ಮ ನಾಮಪತ್ರವನ್ನು ಸಲ್ಲಿಸಿದರು. ನಾಮಪತ್ರ ಸಲ್ಲಿಸುವ ವೇಳೆ ನಳಿನ್ ಕುಮಾರ್ ಕಟೀಲ್ ಹಾಗೂ ಕರ್ನಾಟಕ ಚುನಾವಣಾ ಉಸ್ತುವಾರಿ ಅಣ್ಣಾಮಲೈ ಸಾಥ್ ಕೊಟ್ಟರು.
ನಳಿನ್ ಕುಮಾರ್ ಕಟೀಲ್ ಮಾತನಾಡಿ, ಯಾವುದೇ ಸಮುದಾಯಕ್ಕೆ ನೋವು ಮಾಡದೇ ಇರುವ ಪಕ್ಷವೆಂದರೆ ಅದು ಬಿಜೆಪಿ. ಎಲ್ಲ ಸಮುದಾಯಕ್ಕೆ ಬಿಜೆಪಿ ಸಾಮಾಜಿಕ ನ್ಯಾಯ ನೀಡಿದೆ. ಲಿಂಗಾಯತ ಸಮುದಾಯಕ್ಕೆ ವಿಶೇಷವಾಗಿ ಅತೀ ಹೆಚ್ಚು ಮಾನ್ಯತೆ ಕೊಟ್ಟಿರುವುದು ಬಿಜೆಪಿ ಎಂದರು. ಅತೀ ಹೆಚ್ಚು ಲಿಂಗಾಯತ ಇರುವ ಪಾರ್ಟಿ ಬಿಜೆಪಿಯಾಗಿದೆ. ಈಗಾಗಲೇ ಲಿಂಗಾಯತರನ್ನ ಮುಖ್ಯಮಂತ್ರಿಗಳನ್ನಾಗಿ ಮಾಡಲಾಗಿದೆ. ಮುಂದೆಯೂ ಲಿಂಗಾಯತರನ್ನ ಸಿಎಂ ಮಾಡಿಲು ಬಿಜೆಪಿ ಪಕ್ಷದಿಂದ ಮಾತ್ರ ಸಾಧ್ಯವಾಗಲಿದೆ. ಆದರೆ ಕಾಂಗ್ರೆಸ್ ಈ ಬಗ್ಗೆ ಅಪಪ್ರಚಾರ ಮಾಡುತ್ತಿದೆ ಎಂದು ದೂರಿದರು. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿಯನ್ನ ಬಿಟ್ಟು ಹೋದ ಬಳಿಕ ಬಿ.ಎಸ್.ಸಂತೋಷ ಬಗ್ಗೆ ಆರೋಪ ಮಾಡಿದ್ದಾರೆ. ಈ ರೀತಿಯಾಗಿ ಆರೋಪ ಮಾಡುವುದು ಶೋಭೆ ತರುವುದಿಲ್ಲ ಎಂದು ಹೇಳಿದರು.
ಬಿಜೆಪಿಯ ಚುನಾವಣಾ ಪ್ರಚಾರಕ್ಕೆ 40 ಸ್ಟಾರ್ ಪ್ರಚಾರಕರ ಹೆಸರನ್ನು ಘೋಷಿಸಲಾಗಿದೆ. ಬಿ.ವೈ.ವಿಜಯೇಂದ್ರ ಚುನಾವಣಾ ಕಣದಲ್ಲಿದ್ದಾರೆ. ಯಾರ ಯಾರನ್ನು ಎಲ್ಲೆಲ್ಲಿ ಉಪಯೋಗಿಸಬೇಕೋ, ಅಂಥವರ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ. ಜಗದೀಶ್ ಶೆಟ್ಟರ್ ಪಕ್ಷ ಬಿಟ್ಟ ಬಳಿಕ, ಹುಬ್ಬಳ್ಳಿ-ಧಾರವಾಡ ಭಾಗದ ಬಿಜೆಪಿ ಕಾರ್ಯಕರ್ತರಲ್ಲಿ ಗೊಂದಲ ವಿಚಾರವಾಗಿ ಮಾತನಾಡಿ, ಎಲ್ಲೂ ಅಸಮಾಧಾನವಿಲ್ಲ. ಅಲ್ಲಿ ಕಾರ್ಯಕರ್ತರ ಜೊತೆ ಸಭೆ ನಡೆಸಿದ್ದೇನೆ ಎಂದರು. ಹುಬ್ಬಳ್ಳಿಯಲ್ಲಿ ಯುವ ಮೋರ್ಚಾದ ಕಾರ್ಯಕರ್ತನ ಹತ್ಯೆ ಕುರಿತು ಪ್ರತಿಕ್ರಿಯಿಸಿ, ನಮ್ಮ ಕಾರ್ಯಕರ್ತನ ಹತ್ಯೆಯಾಗಿದೆ. ಈ ಕೂಡಲೇ ಇದರ ಸಂಪೂರ್ಣವಾದ ತನಿಖೆ ನಡೆಸಬೇಕು. ಕೊಲೆ ಹಿಂದೆ ರಾಜಕೀಯದ ಉದ್ದೇಶವಿದೆಯಾ? ಅನ್ನೋದರ ಬಗ್ಗೆ ತನಿಖೆ ಮಾಡಬೇಕು ಎಂದು ಒತ್ತಾಯಿಸಿದರು.
ಲಿಂಗಸುಗೂರು ಕ್ಷೇತ್ರದ ಕಾಂಗ್ರೆಸ್ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಆರ್.ರುದ್ರಯ್ಯ ಟಿಕೆಟ್ ಕೈತಪ್ಪಿದ್ದಕ್ಕೆ ಸಾವಿರಾರು ಕಾರ್ಯಕರ್ತರೊಂದಿಗೆ ಇಂದು ತಹಶೀಲ್ದಾರ್ ಕಚೇರಿಗೆ ಆಗಮಿಸಿ ಪಕ್ಷೇತರ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿದರು. ರಾಯಚೂರು ನಗರದ ಕ್ಷೇತ್ರದಿಂದ ಎಐಸಿಸಿ ಕಾರ್ಯದರ್ಶಿ ಎನ್.ಎಸ್.ಬೋಸರಾಜ್ ಪುತ್ರ, ರವಿ ಬೋಸರಾಜ್ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರವನ್ನು ಸಲ್ಲಿಸಿದರು. ಇವರು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಇದುವರೆಗೆ ರಾಯಚೂರು ನಗರ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ.
ಇದನ್ನೂ ಓದಿ:ಶಿಗ್ಗಾಂವಿಯಲ್ಲಿ ಸಿಎಂ ಭರ್ಜರಿ ರೋಡ್ ಶೋ: ನಟ ಸುದೀಪ್, ನಡ್ಡಾ ಜತೆಗೆ ಬಂದು ನಾಮಪತ್ರ ಸಲ್ಲಿಕೆ.. ಕಾಂಗ್ರೆಸ್ ಅಂದರೆ ಭ್ರಷ್ಟಾಚಾರ ಎಂದು ನಡ್ಡಾ ವಾಗ್ದಾಳಿ