ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ರಾಯಚೂರು:ಮುಂದಿನ ಚುನಾವಣೆಗೆ ಹಾಸನ ಜೆಡಿಎಸ್ ಟಿಕೆಟ್ಗೆ ಹೆಚ್ಡಿಕೆ ಕುಟುಂಬದಲ್ಲಿ ಜಟಾಪಟಿ ನಡೆಯುತ್ತಿರುವ ಬೆನ್ನಲ್ಲೇ ಭವಾನಿ ರೇವಣ್ಣ ಮಹಿಳಾ ಶಕ್ತಿಯೆಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಬಣ್ಣಿಸಿದ್ದಾರೆ. ಪಂಚರತ್ನ ಯಾತ್ರೆಯ ಆರನೇಯ ದಿನವಾದ ಭಾನುವಾರ ಸಿಂಧನೂರಿನಲ್ಲಿ ಯಾತ್ರೆ ನಡೆಸಿ, ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಾಸನ ಟಿಕೆಟ್ ಗೊಂದಲ ವಿಚಾರದ ಕುರಿತು ಪ್ರತಿಕ್ರಿಯಿಸಿದರು.
ಮಕ್ಕಳು ಅವರವರ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ಅಂತಿಮ ತೀರ್ಮಾನವನ್ನು ನಾವು ಮಾಡುತ್ತೇವೆ. ಹೆಚ್.ಡಿ. ರೇವಣ್ಣ ಹೇಳಿದ ಮೇಲೆ ಆಯಿತ್ತು. ಭವಾನಿ ರೇವಣ್ಣ ಅವರಿಗೆ, ಸೂಕ್ತವಾದ ಸಮಯದಲ್ಲಿ ಯಾವ ಸ್ಥಾನಮಾನದಲ್ಲಿ ಕೆಲಸ ಮಾಡಬೇಕು, ಅವರಿಗೆ ಏನು ಜವಾಬ್ದಾರಿ ನೀಡಬೇಕೋ ಅದನ್ನು ನೀಡುತ್ತೇವೆ, ಭವಾನಿ ರೇವಣ್ಣ ಮಹಿಳಾ ಶಕ್ತಿ ಇದ್ದಂತೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಬಣ್ಣಿಸಿದರು.
ಕಾಂಗ್ರೆಸ್ ಮತ್ತು ಬಿಜೆಪಿ ಚುನಾವಣೆ ಮಾಡುವ ರೀತಿಯಲ್ಲಿ ವ್ಯತ್ಯಾಸವಿದೆ, ಕಾಂಗ್ರೆಸ್ ನಾಯಕರು ರೈತರ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಮಾಡುತ್ತಿಲ್ಲ, ಬಿಜೆಪಿಯ ಭ್ರಷ್ಟಾಚಾರದ ಬಗ್ಗೆ ಪ್ರಜಾಧ್ವನಿ ಯಾತ್ರೆ ಮಾಡುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿಗೆ ಭ್ರಷ್ಟ ಸರ್ಕಾರ ಎಂದು ಸರ್ಟಿಫಿಕೆಟ್ ಕೊಟ್ಟಿದ್ದಾರೆ ಎಂದರು.
ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಭ್ರಷ್ಟಾಚಾರ ಮಾಡುವ ಪಕ್ಷ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಆದರೆ ಅಮಿತ್ ಶಾ ಎಲ್ಲಿಯೂ ನಾಡಿನ ಸಮಸ್ಯೆಗಳಿಗೆ ಪರಿಹಾರ ನೀಡಿರುವ ಬಗ್ಗೆ ಹೇಳಿಲ್ಲ. ಜೆಡಿಎಸ್ಗೆ ಮತ ಹಾಕಿದರೆ ಕಾಂಗ್ರೆಸ್ಗೆ ಮತದಾನ ಮಾಡಿದಂತೆ ಎಂದು ಬಿಜೆಪಿಯವರು ಹೇಳುತ್ತಾರೆ. ಇನ್ನೊಂದೆಡೆ ಜೆಡಿಎಸ್ಗೆ ಮತ ಕೊಟ್ಟರೇ ಬಿಜೆಪಿಗೆ ಮತ ಕೊಟ್ಟಂತೆ ಎಂದು ಕಾಂಗ್ರೆಸ್ ಪಕ್ಷದವರು ಹೇಳುತ್ತಾರೆ. ಈ ಕುರಿತು ಎರಡು ರಾಷ್ಟ್ರೀಯ ಪಕ್ಷಗಳು ಒಗ್ಗಟ್ಟನ್ನು ಬಿಡಿಸಿ ಜನರಿಗೆ ತಿಳಿಸಿ ಎಂದು ಕುಮಾರಸ್ವಾಮಿ ಸವಾಲು ಹಾಕಿದರು.
ಜೆಡಿಎಸ್ ಕಾರ್ಯಕರ್ತರಿಗೆ ಕಾಂಗ್ರೆಸ್ ಆಹ್ವಾನ ನೀಡಿರುವುದರ ಬಗ್ಗೆ ಪ್ರಕ್ರಿಯಿಸಿದ ಹೆಚ್ಡಿಕೆ, ನಾನು ಈ ರಾಜ್ಯದ ಜನತೆ ಮುಂದೆ ಬಂದಿರುವುದು, ನಾಡಿನ ಜನರ ಸಂಪೂರ್ಣ ಸಮಸ್ಯೆಗಳಿಗೆ ಪರಿಹಾರ ನೀಡಲು. ನನಗೆ ಸಂಪೂರ್ಣ ಬಹುಮತ ಕೊಡಿ ಎಂದು ಕೇಳುತ್ತಿದ್ದೇನೆ. ನಮಗೆ ಗಿರಾಕಿ ಅಂದರಲ್ಲ. ಜೆಡಿಎಸ್ 20-22 ಸೀಟು ಗೆಲ್ಲುತ್ತದೆ ಎಂದು ಸಿದ್ದರಾಮಯ್ಯ ಹೇಳುತ್ತಾರೆ, ಕಾಂಗ್ರೆಸ್ 150 ಸೀಟು ಗೆಲ್ಲುತ್ತದೆ ಅಂದರೆ ಎಲ್ಲರೂ ನಮ್ಮ ಪಕ್ಷಕ್ಕೆ ಬನ್ನಿ ಎನ್ನುತ್ತಿರುವುದು ಯಾಕೆ ಎಂದು ಪ್ರಶ್ನಿಸಿದರು.
ಮುಂಬೈ- ಹೈದರಾಬಾದ್ ಕರ್ನಾಟಕದಲ್ಲಿ ಜೆಡಿಎಸ್ಗೆ ನೆಲೆ ಇಲ್ಲ ಎಂದ ಸಿದ್ದರಾಮಯ್ಯ ಹೇಳಿಕೆಗೆ, ಈ ಎರಡು ಭಾಗದ ಜನರು ಜೆಡಿಎಸ್ನ್ನು ಬೆಂಬಲಿಸಲು ತೀರ್ಮಾನ ಮಾಡಿದ್ದಾರೆ, ಜೆಡಿಎಸ್ಗೆ ಯಾವುದೇ ಸಿದ್ಧಾಂತವಿಲ್ಲ ಎಂದವರಿಗೆ ನೀವೂ ಹುಟ್ಟುತ್ತಾ ಕಾಂಗ್ರೆಸ್, ನಾವು ಗೆದ್ದು ಎತ್ತಿನ ಬಾಲ ಹಿಡಿಯುವರು. ನೀವೂ ಎರಡು ರಾಷ್ಟ್ರೀಯ ಪಕ್ಷಗಳು ಸೋತ ಎತ್ತಿನ ಬಾಲ ಹಿಡಿದುಕೊಂಡು ಬರುತ್ತಿರಲಿಲ್ಲ. ಇವತ್ತು ಜನಗಳ ಸಮಸ್ಯೆಗಳು ಹತ್ತಾರು ಇವೆ. ಹತ್ತಿ ಬೆಳೆದ ರೈತರು ಕಣ್ಣೀರು ಹಾಕುತ್ತಿದ್ದಾರೆ. ತೊಗರಿ ಬೆಳೆಗೆ ಯಾವಾಗ ಪರಿಹಾರ ಕೊಡುತ್ತಾರೋ ಗೊತ್ತಿಲ್ಲ. ಶೌಚಾಲಯ, ರಸ್ತೆ, ಬೇಕು ಅಂತ ಸಲ್ಲಿಸಿದ ಅರ್ಜಿ ಒಂದು ಮೂಟೆ ಆಗುತ್ತೆ, ಇದು ರಾಷ್ಟ್ರೀಯ ಪಕ್ಷಗಳ ಸಾಧನೆ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ:ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆಗೊಂಡ ಬಿಜೆಪಿ ಮಾಜಿ ಶಾಸಕ ಬಸವರಾಜ್ ಮಂಡಿಮಠ