ರಾಯಚೂರು:ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಯೋಜನೆಗಳು ಜಾರಿಗೆ ತಂದಿವೆ. ಆದರೆ ಜಿಲ್ಲೆಯಲ್ಲಿ ಕಾರ್ಮಿಕರಿಗೆ ಮಾಹಿತಿ ಕೊರತೆ ಹಾಗೂ ಅಧಿಕಾರಿಗಳ ವಿಳಂಬ ನೀತಿ ಧೋರಣೆಯಿಂದಾಗಿ ಜಿಲ್ಲೆಯ ಕಟ್ಟಡ ಕಾರ್ಮಿಕರು ಸೌಲಭ್ಯ ವಂಚಿತರಾಗುವಂತಾಗಿದೆ.
ಜಿಲ್ಲೆಯಲ್ಲಿ ಸುಮಾರು 16 ಸಾವಿರ ನೋಂದಾಯಿತ ಕಟ್ಟಡ ಕಾರ್ಮಿಕರಿದ್ದಾರೆ. ಕಾರ್ಮಿಕ ಇಲಾಖೆ ಮತ್ತು ಕಾರ್ಮಿಕ ಕಲ್ಯಾಣ ಮಂಡಳಿಗಳ ಮೂಲಕ ಕಟ್ಟಡ ನಿರ್ಮಾಣ ಮತ್ತು ಇತರೆ ಕಾರ್ಮಿಕರಿಗೆ ಆರ್ಥಿಕ ಹಾಗೂ ಸಾಮಾಜಿಕ ಭದ್ರತೆ, ಆರೋಗ್ಯ ಮತ್ತು ರಕ್ಷಣೆ ನೀಡಬೇಕು. ಹಾಗೂ ಅಂತ್ಯಕ್ರಿಯೆ ಯೋಜನೆಯಡಿಯಲ್ಲಿ ವೆಚ್ಚ ಭರಿಸಲು 54 ಸಾವಿರ ರೂ., ಕೆಲಸದ ವೇಳೆ ಮೃತಪಟ್ಟರೆ ಕುಟುಂಬಕ್ಕೆ 3 ಲಕ್ಷ ಸಹಾಯಧನ ಕೊಡಬೆಕು.
ಮಹಿಳಾ ಕಾರ್ಮಿಕರ ಹೆರಿಗೆ ವೆಚ್ಚಕ್ಕಾಗಿ ರೂ. 15 ಸಾವಿರ. ಶೈಕ್ಷಣಿಕ ಸಹಾಯಧನ 3ರಿಂದ 20 ಸಾವಿರ ರೂ., ಮದುವೆ ವೆಚ್ಚಕ್ಕೆ 50 ಸಾವಿರ ರೂ., ವೈದ್ಯಕೀಯ ಚಿಕಿತ್ಸೆ ವೆಚ್ಚ ಸೇರಿದಂತೆ ಅನೇಕ ಯೋಜನೆ ಜಾರಿಗೆ ತರಲಾಗಿದೆ. ಆದ್ರೆ ಕಟ್ಟಡ ಕಾರ್ಮಿಕರಿಗೆ ಸದರಿ ಸೌಲಭ್ಯಗಳು ಸುಲಭವಾಗಿ ಹಾಗೂ ತ್ವರಿತಗತಿಯಲ್ಲಿ ಸಿಗುತ್ತಿಲ್ಲವಂತೆ. ಇದರಿಂದ ಕಟ್ಟಡ ಕಾರ್ಮಿಕರ ಸ್ಥಿತಿ ಅಯೋಮಯವಾಗಿದೆ.
ಕಾರ್ಮಿಕರಿಗೆ ಸಿಗುತ್ತಿಲ್ಲ ಯೋಜನೆಗಳ ಲಾಭ ಸೌಲಭ್ಯ ವಿಳಂಬಕ್ಕೆ ಕಾರಣ
ಜಿಲ್ಲೆಯಲ್ಲಿ ಕಾರ್ಮಿಕ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಹಾಗೂ ನಿಧಾನಗತಿಯ ಕೆಲಸದಿಂದಾಗಿ ಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯ ಸಿಗುತ್ತಿಲ್ಲ. ಸರ್ಕಲ್ಗೆ ಒಬ್ಬ ಕಾರ್ಮಿಕ ನಿರಿಕ್ಷಕರಿರಬೇಕು. ಜಿಲ್ಲೆಯಲ್ಲಿ ಇಂಚಾರ್ಜ್ ಕಾರ್ಮಿಕ ನಿರೀಕ್ಷಕರಿದ್ದು, ಅವರು ರಾಯಚೂರು ಮತ್ತು ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆಗಳ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಹೆಚ್ಚಿನ ಕಾರ್ಯಭಾರದಿಂದಾಗಿ ಆಡಳಿತ ನಡೆಸುವಲ್ಲಿ ವಿಫಲರಾಗಿದ್ದಾರೆ ಎನ್ನಲಾಗುತ್ತಿದೆ.
ಈ ಹಿಂದೆ ಕಚೇರಿಯಲ್ಲಿ ಕಾರ್ಮಿಕ ನೊಂದಣಿ ಮಾಡಲಾಗುತ್ತಿತ್ತು. ಸದ್ಯ ಆನ್ಲೈನ್ನಲ್ಲಿ ಮಾಡಿಸಬೇಕು. ಇದರಿಂದ ಅವಿದ್ಯಾವಂತ ಕಾರ್ಮಿಕರು ಸಮಯ ಹಾಗೂ ಹಣದ ಹೊರೆ ಮತ್ತು ಇತರೆ ಕಾರಣಗಳಿಂದ ನೋಂದಣಿ ಕಾರ್ಯ ವಿಳಂಬ ಮಾಡುತ್ತಿದ್ದಾರೆ. ಇದರಿಂದಾಗಿ 11 ತಿಂಗಳಾದ್ರೂ ನೋಂದಣಿ ಕಾರ್ಯಗಳಾಗಿಲ್ಲ. ಸದರಿ ಎಲ್ಲಾ ಯೋಜನೆಗಳಿಗೆ ಅರ್ಜಿ ಹಾಕಿ ವರ್ಷವಾಗುತ್ತಾ ಬಂದರೂ ಫಲಾನುಭವಿಗಳಿಗೆ ಪ್ರೋತ್ಸಾಹಧನ ಸಿಗುತ್ತಿಲ್ಲ ಎಂಬ ಆರೋಪ ಕೂಡ ಕೇಳಿ ಬಂದಿದೆ.
2018-19 ಸಾಲಿನ ಶೈಕ್ಷಣಿಕ ಧನಸಹಾಯ ಹಿಂದಿನ ವರ್ಷದ ಬಾಕಿಯಿದ್ದ ಅರ್ಜಿಗಳು ಸೇರಿ, 914 ಅರ್ಜಿಗಳು ವಿಲೇವಾರಿ ಮಾಡಿ ರೂ. 42.83 ಲಕ್ಷ ಖರ್ಚು ಮಾಡಲಾಗಿದೆ. ಮದುವೆ ಧನಸಹಾಯಕ್ಕೆ ಹಿಂದಿನ ಸಾಲಿನ ಬಾಕಿಯಿದ್ದ 32 ಅರ್ಜಿಗಳು ಸೇರಿ 184 ಅರ್ಜಿಗಳಿಗೆ ರೂ. 92 ಲಕ್ಷ ವೆಚ್ಚವಾಗಿದೆ. ಹೆರಿಗೆ ಧನಸಹಾಯಕ್ಕೆ ಹಿಂದಿನ ವರ್ಷದ 23 ಬಾಕಿಯಿದ್ದ 2018-19 ನೇ ಸಾಲಿನ 37 ಅರ್ಜಿಗಳಿಗೆ ರೂ. 75 ಸಾವಿರ ಖರ್ಚು ಮಾಡಲಾಗಿದೆ.
ವೈದ್ಯಕೀಯ ಧನಸಹಾಯ ಹಿಂದಿನ ವರ್ಷದ ಒಂದು ಅರ್ಜಿ ಹಾಗೂ 2018-19 ನೇ ಸಾಲಿನ ಒಂದು ಅರ್ಜಿಗೆ 12 ಸಾವಿರ ರೂ. ಖರ್ಚು ಮಾಡಲಾಗಿದೆ. ಇನ್ನು 2017 ನೇ ಸಾಲಿನ 970 ಬಾಕಿ ಅರ್ಜಿಗಳು ಸೇರಿ 2018-19 ನೇ ಸಾಲಿನಲ್ಲಿ 1081 ಅರ್ಜಿಗಳು ಸೇರಿ ಒಟ್ಟು 1136 ಅರ್ಜಿಗಳು ಎಲ್ಲಾ ಯೋಜನೆಗಳಿಂದ ವಿಲೇವಾರಿ ಮಾಡಿ ರೂ. 1.41 ಕೋಟಿ ಕಟ್ಟಡ ಕಾರ್ಮಿಕರಿಗೆ ಖರ್ಚು ಮಾಡಲಾಗಿದೆ ಎಂದು ಇಲಾಖೆಯಿಂದ ಮಾಹಿತಿ ಲಭ್ಯವಾಗಿದೆ.
ಈ ಬಗ್ಗೆ ಕಾರ್ಮಿಕ ನಿರೀಕ್ಷಕ ಚಂದ್ರಶೇಖರ್ ಅವರನ್ನು ಕೇಳಿದಾಗ, ಈ ಹಿಂದೆ ಇಲಾಖೆಯ ಸೌಲಭ್ಯ ಅರ್ಹರಿಗೆ ಸಿಗುತ್ತಿರಲಿಲ್ಲ. ಆದ್ರೆ ಕಟ್ಟಡ ಕಾರ್ಮಿಕರನ್ನು ಗುರುತಿಸಿ ಅರ್ಹರಿಗೆ ಸೌಲಭ್ಯ ತಲುಪಿಸುವ ನಿಟ್ಟಿನಲ್ಲಿ ಮನೆ ಮನೆಗೆ ತೆರಳಿ ಪರಿಶೀಲನೆ ನಡೆಸಲಾಗುತ್ತಿದೆ. ಅದ್ದರಿಂದ ಕೊಂಚ ವಿಳಂಬವಾಗಿದೆ. ಅಲ್ಲದೇ ಕಾರ್ಮಿಕ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿಂದ ಯೋಜನೆಗಳು ತಲುಪಲು ವಿಳಂಬವಾಗಿದೆ ಎಂದು ತಿಳಿಸಿದರು.