ರಾಯಚೂರು:ಉಪಚುನಾವಣೆಯಲ್ಲಿ ಅನರ್ಹ ಶಾಸಕರಿಗೆ ಟಿಕೆಟ್ ನೀಡಿದರೆ ಬಿಜೆಪಿಯಲ್ಲಿ ಬಂಡಾಯ ಏಳುವ ಸಾಧ್ಯತೆ ಕಂಡು ಬಂದ ಹಿನ್ನೆಲೆಯಲ್ಲಿ ಪಕ್ಷದಲ್ಲಿರುವ ಅತೃಪ್ತರನ್ನು ಓಲೈಸುವ ಪ್ರಯತ್ನಕ್ಕೆ ಮುಂದಾಗಿದ್ದು, ಅದಕ್ಕಾಗಿ ನಿಗಮ-ಮಂಡಳಿ ಸ್ಥಾನಗಳನ್ನು ದಾಳವಾಗಿ ಬಳಸಿಕೊಂಡಿದೆ.
ಅದರಂತೆಕಳೆದ ಬಾರಿ ಚುನಾವಣೆಯಲ್ಲಿ ಮಸ್ಕಿ ವಿಧಾನಸಭೆ ಕ್ಷೇತ್ರದಿಂದಬಿಜೆಪಿಯಿಂದ ಸ್ಪರ್ಧಿಸಿದ್ದ ಬಸವನಗೌಡ ತುರುವಿಹಾಳ ಅವರಿಗೂ ನಿಗಮ ಮಂಡಳಿಯಲ್ಲಿ ಅವಕಾಶ ನೀಡಿದೆ. ಸರ್ಕಾರ ರಚಿಸಲು ಬೆನ್ನೆಲುಬಾಗಿದ್ದ ಅನರ್ಹ ಶಾಸಕ ಪ್ರತಾಪ್ ಗೌಡ ಪಾಟೀಲ್ ಅವರಿಗೆ ಉಪಚುನಾವಣೆಯಲ್ಲಿ ಟಿಕೆಟ್ ನೀಡುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ನಮಗೆ ಟಿಕೆಟ್ ನೀಡಬೇಕು ಎಂದು ಬಸವನಗೌಡ ಒತ್ತಾಯಿಸಿದ್ರು.
ಇದು ಪ್ರತಾಪ್ ಗೌಡ ಪಾಟೀಲ್‌ಗೆ ತಲೆ ಬಿಸಿ ತಂದಿತ್ತು. ಬಂಡಾಯ ಶಮನ ಮಾಡಲು ಬಸವನಗೌಡ ಅವರಿಗೆ ಅಚ್ಚುಕಟ್ಟು ಪ್ರದೇಶಾಭಿವೃದ್ದಿ (ಕಾಡಾ) ತುಂಗಭದ್ರಾ ಯೋಜನೆ ಅಧ್ಯಕ್ಷರನ್ನಾಗಿ ನೇಮಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ. ಪ್ರತಾಪ್ ಗೌಡ ಪಾಟೀಲ್ ವಿರುದ್ಧ ಕೇವಲ 213 ಮತಗಳ ಅಂತರದಲ್ಲಿ ಬಸವನಗೌಡ ಪರಾಭವಗೊಂಡಿದ್ದರು.
ನಿಗಮ ಮಂಡಳಿಯಲ್ಲಿ ಅಧ್ಯಕ್ಷ ಸ್ಥಾನ ನೀಡಿರುವ ಕುರಿತು 'ಈಟಿವಿ ಭಾರತ'ದೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಬಸವನಗೌಡ ತುರವಿಹಾಳ, ಸರ್ಕಾರ ನೀಡಿರುವ ಕಾಡಾ ಸ್ಥಾನದ ವಿಚಾರವಾಗಿ ಮುಖಂಡರೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನಕ್ಕೆ ಬರಲಾಗುವುದು. ಕಾರ್ಯಕರ್ತರು, ಮುಖಂಡರು ಉಪಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಅನರ್ಹ ಶಾಸಕರ ಪ್ರಕರಣ ಸುಪ್ರೀಂಕೋರ್ಟ್ನಲ್ಲಿದೆ. ತೀರ್ಪು ಬಂದ ಬಳಿಕ ಚರ್ಚಿಸಬೇಕೆಂದುಕೊಂಡಿದ್ದೆ. ಅಷ್ಟರಲ್ಲಾಗಲೇ ನೇಮಕ ಆದೇಶ ಮಾಡಿದ್ದಾರೆ ಎಂದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅಕ್ರಮ ಮತದಾನ ನಡೆದಿದೆ ಎಂದು ನ್ಯಾಯಾಲಯದಲ್ಲಿ ಹೂಡಿರುವ ದಾವೆ ಹಿಂಪಡೆಯುತ್ತಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈಗಾಗಲೇ ಚುನಾವಣಾ ದಿನಾಂಕ ಘೋಷಿಸಿದ್ದಾರೆ. ನಾನು ಹೂಡಿರುವ ದಾವೆಯಿಂದಾಗಿ ಈ ಕ್ಷೇತ್ರಕ್ಕೆ ಚುನಾವಣೆ ತಡೆ ಹಿಡಿದಿದ್ದಾರೆ. ಕೇಸ್ ವಾಪಸ್ ಪಡೆಯುವುದೇ ಬೇಡವೇ? ಎಂಬುದನ್ನು ಮುಖಂಡರೊಂದಿಗೆ ಚರ್ಚಿಸಿಯೇ ತೀರ್ಮಾನಕ್ಕೆ ಬರುತ್ತೇನೆ ಎಂದು ಹೇಳಿದರು. ಪರಾಜಿತ ಅಭ್ಯರ್ಥಿಗೆ ಕಾಡಾ ಅಧ್ಯಕ್ಷ ಸ್ಥಾನ ಒಲಿದು ಬಂದಿದೆ. ಈ ಸ್ಥಾನವನ್ನು ಬಸವನಗೌಡ ಅವರು ಒಪ್ಪುತ್ತಾರೋ ಅಥವಾ ಇಲ್ಲವೋ ಎನ್ನುವುದು ಸದ್ಯ ಕುತೂಹಲ ಕೆರಳಿಸಿದೆ.