ಕರ್ನಾಟಕ

karnataka

ETV Bharat / state

ಬಿಜೆಪಿಯಲ್ಲಿ ಭವಿಷ್ಯವಿಲ್ಲವೆಂದು ಪಕ್ಷ ಬಿಟ್ಟು ಹೋಗುವವರ ಭವಿಷ್ಯವೇ ಮುಗಿದಿರುತ್ತದೆ: ಯತ್ನಾಳ್ - Operation congress

ರಾಜ್ಯದಲ್ಲಿ ನಡೆಯುತ್ತಿರುವ ಆಪರೇಷನ್ ಹಸ್ತದ ಕುರಿತು ಶಾಸಕ‌ ಬಸನಗೌಡ ಪಾಟೀಲ್ ಯತ್ನಾಳ್ ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದರು.

Basanagouda Patil Yatnal
ಬಸನಗೌಡ ಪಾಟೀಲ್ ಯತ್ನಾಳ್

By ETV Bharat Karnataka Team

Published : Sep 8, 2023, 1:08 PM IST

ಸುದ್ದಿಗಾರರೊಂದಿಗೆ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್

ರಾಯಚೂರು : "ರಾಜ್ಯದಲ್ಲಿ ಆಪರೇಷನ್ ಹಸ್ತ ನಡೆಯುತ್ತಿದೆ. ಬೈಂದೂರು ಬಿಜೆಪಿ ಮಾಜಿ ಶಾಸಕ ಸುಕುಮಾರ್ ಶೆಟ್ಟಿ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ. ಪಕ್ಷ ಬಿಟ್ಟು ಹೋಗುವಾಗ ಎಲ್ಲರೂ ಬಿಜೆಪಿಯಲ್ಲಿ ಭವಿಷ್ಯ ಇಲ್ಲ ಅಂತಲೇ ಹೇಳ್ತಾರೆ. ಆದ್ರೆ, ಅವರ ಭವಿಷ್ಯವೇ ಮುಗಿದಿರುತ್ತದೆ. ಕಾರ್ಯಕರ್ತರು, ಬೆಂಬಲಿಗರ ಮೇಲೆ ವಿಶ್ವಾಸವಿಲ್ಲ. ಹಾಗಾಗಿ ಹೋಗಿರ್ತಾರೆ" ಎಂದು ಶಾಸಕ‌ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.

ನಗರದಲ್ಲಿ ನಡೆಯುತ್ತಿರುವ ನಮ್ಮ ಮಣ್ಣು, ನಮ್ಮ ದೇಶ ಅಭಿಯಾನದಲ್ಲಿ ಭಾಗವಹಿಸುವ ಮುನ್ನ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ವಿಧಾನಸಭೆ, ಲೋಕಸಭೆಯಲ್ಲಿನ ಫಲಿತಾಂಶವೇ ಬೇರೆ, ಲೋಕಸಭೆಗೆ ಯಾರನ್ನು ಕಳುಹಿಸಬೇಕು, ಆಯ್ಕೆ ಮಾಡಬೇಕು ಅನ್ನೋದು ಜನರಿಗೆ ಗೊತ್ತಿದೆ. ಜನರಿಗೆ ಮೋದಿ ಬೇಕು ಅನ್ನೋ ಆಸೆಯಿದೆ. ಸದ್ಯಕ್ಕೆ ಭದ್ರತೆ, ಆರ್ಥಿಕತೆಯಲ್ಲಿ ಭಾರತ ಮುಂಚೂಣಿಯಲ್ಲಿದೆ. ನಮ್ಮ ದೇಶವು ಈಗ ಜಗತ್ತಿನ ಮೂರನೇ ಶಕ್ತಿಯಾಗಿ ಬೆಳೆದಿದೆ. ಕೇಂದ್ರದಲ್ಲಿ ೦% ಭ್ರಷ್ಟಾಚಾರ ಇದೆ" ಎಂದು ಕೇಂದ್ರ ಸರ್ಕಾರವನ್ನು ಸಮರ್ಥಿಸಿಕೊಂಡರು.

ಇಂಡಿಯಾ ಮೈತ್ರಿಕೂಟ ವಿಚಾರದ ಕುರಿತು ಮಾತನಾಡಿದ ಅವರು, "ಕಾಂಗ್ರೆಸ್‌ನವರು ಲೋಕಸಭೆಯಲ್ಲಿ ಮರ್ಯಾದೆ ಉಳಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಲಾಲು ಪ್ರಸಾದ್ ಯಾದವ್ ಜಾಮೀನಿನ ಮೇಲಿದ್ದಾರೆ. ಎಲ್ಲರೂ ಜಾಮೀನು ಗಿರಾಕಿಗಳು ಎಂದು ಲೇವಡಿ ಮಾಡಿದರು. ಬಳಿಕ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಆಟವಾಡುತ್ತಿದ್ದಾನೆ. ನಮ್ಮ ಮನಸ್ಥಿತಿ ಕುಂದಿಸಲು ಹೀಗೆ ಮಾಡ್ತಿದ್ದಾರೆ. 135 ಜನರನ್ನೇ ಸಮಾಧಾನ ಮಾಡಲು ಆಗುತ್ತಿಲ್ಲ, ಎರಡು ಮೂರು ತಿಂಗಳಲ್ಲಿ ಅಲ್ಲೇ ಸ್ಫೋಟ ಆಗುತ್ತದೆ ನೋಡುತ್ತಿರಿ. ಇಲ್ಲಿಂದ ಬಿಜೆಪಿ ಅವರನ್ನು ಕರೆದುಕೊಂಡು ಹೋಗಿ ಅಲ್ಲಿ ಟಿಕೆಟ್ ಕೊಡ್ತಾರಾ" ಎಂದು ಪ್ರಶ್ನಿಸಿದರು.

ಶೆಟ್ಟರ್ ವಿರುದ್ಧ ಕಿಡಿ: "ಬಿಜೆಪಿಯಿಂದ ಜಗದೀಶ್ ಶೆಟ್ಟರ್, ಅವರಿಂದ ಬಿಜೆಪಿ ಅಲ್ಲ. ನನ್ನಿಂದ ಲಿಂಗಾಯತರಿಗೆ ಒಳ್ಳೆದಾಯ್ತು ಅಂತಾರೆ, ಹಾಗೇನೂ ಆಗಿಲ್ಲ. ವಿರೋಧ ಪಕ್ಷದ ನಾಯಕರಾಗಿ, ಮುಖ್ಯಮಂತ್ರಿಯಾಗಿ, ನಾಲ್ಕೈದು ಸಚಿವ ಸ್ಥಾನ ಅನುಭವಿಸಿ ಹೋಗಿದ್ದಾರೆ. ಶೆಟ್ಟರ್ ಸಾಕಷ್ಟು ದುಡ್ಡು ಮಾಡಿದ್ದು, ಅವರ ಭೂಹಗರಣ ಸದ್ಯದಲ್ಲೇ ಹೊರಬರುತ್ತೆ ಕಾದು ನೋಡಿ" ಎಂದರು.

"ಡಿ.ಕೆ.ಶಿವಕುಮಾರ್ ಸೇರಿದಂತೆ ಕಾಂಗ್ರೆಸ್​ನವರಿಗೆ 135 ಸೀಟ್ ಬಂದಿದೆ ಅಂತ ಅಹಂಕಾರ ಬಂದಿದೆ. ಹೀಗಾಗಿ, ರೈತರ ಆತ್ಮಹತ್ಯೆ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ನಮ್ಮ ವಿಜಯಪುರದ ಮಂತ್ರಿಯೊಬ್ಬರು 5 ಲಕ್ಷಕ್ಕಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದಿದ್ದಾರೆ. ನಾನು ಅವರಿಗೆ 5 ಕೋಟಿ ಕೊಡುತ್ತೇನೆ, ಅವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರಾ?" ಎಂದು ಸವಾಲೆಸೆದರು.

ಇದನ್ನೂ ಓದಿ :ಯತ್ನಾಳ್​ ವಿರುದ್ಧ ಹೈಕಮಾಂಡ್ ಸೂಕ್ತ ಕ್ರಮ ಕೈಗೊಳ್ಳಲಿ : ಸಂಸದ ಸಂಗಣ್ಣ ಕರಡಿ

ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ನಿಯಮ ಜಾರಿಗೆ ತರುವ ಬಗ್ಗೆ ಮಾತನಾಡಿ, ಕಾಂಗ್ರೆಸ್ ಅಂದ್ರೆ ಯಾವಾಗಲೂ ಹಿಂದೂ ವಿರೋಧಿ. ಆದ್ರೆ, ನಾವು ನಮ್ಮ ಹಬ್ಬ ಹರಿದಿನಗಳ‌ ಮೇಲೆ ಯಾವುದೇ ನಿರ್ಬಂಧ ಹಾಕಿದರೂ ಕೇಳೋದಿಲ್ಲ. ಇದನ್ನು‌ ಹಿಂದಿನಿಂದಲೂ ಮಾಡಿಕೊಂಡು ಬಂದಿದ್ದೇವೆ. ಈಗಲೂ ಗಣಪತಿ ಕೂರಿಸಲು ಪೊಲೀಸರ ಅನುಮತಿ ತೆಗೆದುಕೊಳ್ಳುವುದಿಲ್ಲ. ಎಷ್ಟು ಕೇಸ್ ಹಾಕ್ತೀರೋ ಹಾಕಿ. ಇದು ಹಿಂದೂಸ್ತಾನ್​, ಪಾಕಿಸ್ತಾನ​ ಅಲ್ಲ ಎಂದರು.

ABOUT THE AUTHOR

...view details