ರಾಯಚೂರು :ಬಿಜೆಪಿ(ಭಾರತೀಯ ಜನತಾ ಪಕ್ಷ) ಮತ್ತು ಕಾಂಗ್ರೆಸ್ನವರು ಯಾವ ಪುರುಷಾರ್ಥಕ್ಕೆ ರಾಜ್ಯದಲ್ಲಿ ಯಾತ್ರೆ ಮಾಡುತ್ತಿದ್ದೀರಿ ಎಂದು ಎರಡು ರಾಷ್ಟ್ರೀಯ ಪಕ್ಷಗಳ ವಿರುದ್ಧ ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ರಾಯಚೂರು ಜಿಲ್ಲೆ ಸಿಂಧನೂರು ಪಟ್ಟಣದಲ್ಲಿ ಶಾಸಕ ನಾಡಗೌಡ ಅವರ ಜನ್ಮ ದಿನಾಚರಣೆ ನಿಮಿತ್ತವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಸುದ್ದಿಗಾರರೊಂದಿಗೆ ನಿಖಿಲ್ ಕುಮಾರಸ್ವಾಮಿ ಮಾತನಾಡಿದರು.
ಬಿಜೆಪಿ ನಾಯಕರ ಜನ ಸಂಕಲ್ಪ ಯಾತ್ರೆಯನ್ನು ಮಾಡಿದ್ದೀರಿ. ಯಾವ ಪುರುಷಾರ್ಥಕ್ಕೆ ಜನ ಸಂಕಲ್ಪ ಯಾತ್ರೆ ಮಾಡುತ್ತಿದ್ದೀರಿ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರ ಶೇ. 40 ಪೆರ್ಸೆಂಟ್ ಲೂಟಿ ಹೊಡೆಯುತ್ತಿದ್ದೀರ. ರಾಜ್ಯದ ಜನರ ಬೊಕ್ಕಸದ ಹಣವನ್ನು ಲೂಟಿ ಹೊಡೆಯಲು ಜನ ಸಂಕಲ್ಪ ಯಾತ್ರೆ ಮಾಡುತ್ತೀರಾ? ಎಂದು ನಿಖಿಲ್ ಕುಮಾರಸ್ವಾಮಿ ಪ್ರಶ್ನಿಸಿದರು.
ಕಾಂಗ್ರೆಸ್ ಜೋಡೋ ಯಾತ್ರೆಗೂ ಟಾಂಗ್.. ಕಾಂಗ್ರೆಸ್ನ ವಯನಾಡ್ ಸಂಸದ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆ ನಡೆಯುತ್ತಿದೆ. ಕನ್ಯಾಕುಮಾರಿಯಿಂದ ಕಾಸ್ಮೀರದವರೆಗೆ ಅವರು ನಡೆಸುತ್ತಿರುವ ಯಾತ್ರೆಯನ್ನು ನೀವು ನೋಡಿದ್ದೀರಿ. ಅದು ಭಾರತ್ ಜೋಡೋ ಯಾತ್ರೆಯಲ್ಲ, ಬದಲಾಗಿ ಕಾಂಗ್ರೆಸ್ ನಾಯಕರ ಜೋಡೋ ಯಾತ್ರೆಯಾಗಿದೆ. ರಾಜ್ಯದಲ್ಲಿ ಯಾವ ಜೋಡೋನೂ ಆಗುವುದಿಲ್ಲ. ಅದೇ ರೀತಿ ಬಿಜೆಪಿಯ ಯಾವ ಸಂಕಲ್ಪವೂ ನಡೆಯುವುದಿಲ್ಲ. ಸ್ವಾತಂತ್ರ್ಯ ಬಂದು 75 ವರ್ಷವಾಗಿದೆ. ಎರಡೂ ರಾಷ್ಟ್ರೀಯ ಪಕ್ಷಗಳು ಹೆಚ್ಚಾಗಿ ಆಡಳಿತ ನಡೆಸಿದ್ದರೂ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲವೆಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರು ಆರೋಪಿಸಿದರು.
ಆದರೆ ಕುಮಾರಣ್ಣ 34 ತಿಂಗಳಲ್ಲಿ ನೀಡಿದ ಕಾರ್ಯಕ್ರಮದ ಬಗ್ಗೆ ರಾಜ್ಯದ ಜನರು ಇವತ್ತು ಚರ್ಚೆ ಮಾಡುತ್ತಾರೆ. 4 ವರ್ಷದಲ್ಲಿ ಏನು ಮಾಡದವರು ಮುಂದಿನ ಐದು ವರ್ಷದಲ್ಲಿ ಬಿಜೆಪಿಯವರು ಮಾಡುತ್ತಾರಾ?, ಕುಮಾರಣ್ಣ ರೈತರ ಸಾಲ ಮನ್ನಾ ಮಾಡಿ ಈಗ ಪಂಚರತ್ನ ರೂಪಿಸಿದ್ದಾರೆ. ಈ ಕಾರ್ಯಕ್ರಮ ಎಲ್ಲರಿಗೂ ಅನುಕೂಲವಾಗಲಿದೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.