ಬೆಂಗಳೂರು: ದಸರಾ ಹಬ್ಬ ಹಾಗೂ ಆಯುಧ ಪೂಜೆ ಹಿನ್ನೆಲೆ ನಗರದ ಚಾಮರಾಜಪೇಟೆಯ ಸಿಎಆರ್ (ಸಿಟಿ ಆರ್ಮ್ ರಿಸರ್ವ್) ಕಚೇರಿಯಲ್ಲಿ ಆಯುಧ ಪೂಜೆ ನಡೆಯಿತು. ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಭಾಗವಹಿಸಿದ್ದರು. ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ನಗರದ ಎಲ್ಲ ಡಿಸಿಪಿಗಳು ಪೂಜೆ ನೆರವೇರಿಸಿದರು.
ಸಿಎಆರ್ ಕಚೇರಿಯಲ್ಲಿರುವ ಎಲ್ಲ ಪೊಲೀಸ್ ವಾಹನಗಳಾದ, ಹೊಯ್ಸಳ, ಚೀತಾ ವಾಹನಗಳು ಹಾಗೂ ಶಸ್ತ್ರಾಸ್ತ್ರಗಳಿಗೆ ಪೂಜೆ ಸಲ್ಲಿಸಿದ ಆಯುಕ್ತ ಕಮಲ್ ಪಂತ್ ದಸರಾ ಹಬ್ಬದ ಪ್ರಯುಕ್ತ ಸಿಎಆರ್ ಕಚೇರಿಯಲ್ಲಿ ದುರ್ಗಾದೇವಿ ಮೂರ್ತಿಯನ್ನು ಕೂಡ ಪ್ರತಿಷ್ಠಾಪನೆ ಮಾಡಿದರು. ದುರ್ಗಾದೇವಿಗೆ ಪೂಜೆ ಮಾಡಿ ನಮನ ಸಲ್ಲಿಸಿದ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಎಲ್ಲಾ ಪೊಲೀಸ್ ಸಿಬ್ಬಂದಿ ಸಾಥ್ ನೀಡಿದರು.
ಶಿವಮೊಗ್ಗದಲ್ಲಿ ಕಳೆಗಟ್ಟಿದ ಆಯುಧ ಪೂಜೆ ಸಂಭ್ರಮ:
ಶಿವಮೊಗ್ಗ ಜಿಲ್ಲಾದ್ಯಂತ ಆಯುಧ ಪೂಜೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್ ಅವರ ನೇತೃತ್ವದಲ್ಲಿ ಶಿವಮೊಗ್ಗದ ಡಿಎಆರ್ ಆವರಣದಲ್ಲಿ ಪೊಲೀಸ್ ಇಲಾಖೆಯ ಎಲ್ಲಾ ವಾಹನಗಳಿಗೆ ಪೂಜೆ ಸಲ್ಲಿಸಲಾಯಿತು. ಮಾತ್ರವಲ್ಲದೇ, ದೊಡ್ಡಪೇಟೆ ಪೊಲೀಸ್ ಠಾಣೆ, ಮಹಿಳಾ ಠಾಣೆಯಲ್ಲೂ ಬಂದೂಕುಗಳು ಹಾಗೂ ರಿವಾಲ್ವರ್ಗಳಿಗೆ ಪೂಜೆ ಸಲ್ಲಿಸುವ ಮೂಲಕ ಆಯುಧ ಪೂಜೆ ಆಚರಿಸಲಾಗಿದೆ.
ಗರಿ ಗರಿ ಬಿಳಿ ಪಂಚೆಯಲ್ಲಿ ಮಿಂಚಿದ ಚಾಮರಾಜನಗರ ಖಾಕಿ ಪಡೆ:
ವರ್ಷಪೂರ್ತಿ ಖಾಕಿ ಧರಿಸಿ ಖದರ್ ತೋರುತ್ತಿದ್ದ ಪೊಲೀಸರು ಆಯಧ ಪೂಜೆ ಪ್ರಯುಕ್ತ ಸಾಂಪ್ರದಾಯಿಕ ದಿರಿಸಾದ ಬಿಳಿ ಪಂಚೆ, ಶರ್ಟ್, ಶಲ್ಯ ಹೊದ್ದು ಜಿಲ್ಲೆಯ ಬಹುತೇಕ ಠಾಣೆಯ ಪೊಲೀಸರು ಸಂಭ್ರಮಿಸಿದರು.ಮಲೆಮಹದೇಶ್ವರ ಬೆಟ್ಟ ಠಾಣೆ, ಚಾಮರಾಜನಗರ ಗ್ರಾಮಾಂತರ ಠಾಣೆ, ತೆರಕಣಾಂಬಿ ಪೊಲೀಸ್ ಠಾಣೆ ಸಿಬ್ಬಂದಿ ಪಂಚೆ-ಶಲ್ಯ, ಮಹಿಳಾ ಕಾನ್ಸ್ಟೇಬಲ್ಗಳು ಸೀರೆಯುಟ್ಟು ಆಯುಧ ಪೂಜೆ ನೆರವೇರಿಸಿದರು.