ಲಿಂಗಸುಗೂರು:ಮಗುವಿನೊಂದಿಗೆ ಆಸ್ಪತ್ರೆಗೆ ಬರುತ್ತಿದ್ದ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ರಾಯಚೂರು ಜಿಲ್ಲೆಯ ಲಿಂಗಸುಗೂರು ಸಮೀಪದ ಸರ್ಜಾಪುರ ಬಳಿ ನಡೆದಿದೆ.
ನಿನ್ನೆ ಮಧ್ಯಾಹ್ನ ಎರಡೂವರೆ ಸುಮಾರಿಗೆ ಲಿಂಗಸುಗೂರು ಸಮೀಪದ ಸರ್ಜಾಪುರ ಬಳಿ ಬರುತ್ತಿದ್ದಾಗ ಖಾಸಗಿ ವಾಹನ ಚಾಲಕ ಮೂತ್ರ ವಿಸರ್ಜನೆ ನೆಪದಲ್ಲಿ ವಾಹನ ನಿಲ್ಲಿಸಿದ್ದಾನೆ. ಬಳಿಕ ಮಹಿಳೆ ಜೊತೆಗಿದ್ದ ಮಗುವನ್ನು ಕಸಿದುಕೊಂಡು ಜೋಳದ ಹೊಲದತ್ತ ಓಡಿದ್ದಾನೆ. ಆಗ ಮಗುವನ್ನು ಆತನಿಂದ ಬಿಡಿಸಿಕೊಳ್ಳಲು ತೆರಳಿದ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎನ್ನಲಾಗಿದ್ದು, ರಸ್ತೆಯಲ್ಲಿ ತೆರಳುತ್ತಿದ್ದ ಜನರು ರಕ್ಷಣೆ ಮಾಡಿದ್ದಾರೆ. ಬಳಿಕ ತಪ್ಪಿಸಿಕೊಂಡು ಬಂದಿದ್ದ ಚಾಲಕನನ್ನು ಜನರು ವಾಹನ ಸಮೇತ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.