ರಾಯಚೂರು:ತಾಲೂಕಿನ ಗಾರಲದಿನ್ನಿ ಗ್ರಾಮದಲ್ಲಿ ಅಸ್ಪೃಶ್ಯರ ಮೇಲೆ ದೌರ್ಜನ್ಯವೆಸಗಿದ ಪರಿಶಿಷ್ಟ ಪಂಗಡ ಜನಾಂಗದ ಮೇಲೆ ಯರಗೇರ ಪೊಲೀಸರು ಪ್ರಕರಣ ದಾಖಲಿಸದೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಡಾ.ಬಿ.ಆರ್.ಅಂಬೇಡ್ಕರ್ ಪೀಪಲ್ಸ್ ಪಾರ್ಟಿ ಸಂಸ್ಥಾಪಕ ಅಧ್ಯಕ್ಷ ದೇವಿಮಿತ್ರ ವಕೀಲ ಆರೋಪಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನದ ಅನುಚ್ಛೇದ 17ರ ಪ್ರಕಾರ ದೇಶದಲ್ಲಿ ಅಸ್ಪೃಶ್ಯ ಆಚರಣೆಯನ್ನು ರದ್ದುಮಾಡಲಾಗಿದೆ. ಯಾರಾದರೂ ಅಸ್ಪೃಶ್ಯತೆ ಆಚರಣೆ ಮಾಡಿದರೆ ಅಂತವರ ವಿರುದ್ಧ 1955ರ ನಾಗರೀಕ ಹಕ್ಕುಗಳ ಸಂರಕ್ಷಣೆ ಕಾಯ್ದೆ ಪ್ರಕಾರ ದೂರು ದಾಖಲಿಸಿ, ಶಿಕ್ಷೆಗೆ ಗುರಿಪಡಿಸಲಾಗುವುದು. ಈ ಪದ್ದತಿ ಆಚರಿಸುವವರ ವಿರುದ್ಧ ಯಾರಾದರೂ ದೂರು ನೀಡಿದರೆ ಅವರ ಮೇಲೆ ದೌರ್ಜನ್ಯ ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು.
ಆದರೆ, ಗಾರಲದಿನ್ನಿ ಗ್ರಾಮದ ಪರಿಶಿಷ್ಟ ಪಂಗಡ ಜನಾಂಗದ ವಿರುದ್ಧ ಪ್ರಕರಣ ದಾಖಲಿಸದೆ, ಹಳ್ಳಿಯಲ್ಲಿ ಇದೆಲ್ಲಾ ಮಾಮೂಲು ಎಂದು ಯರಗೇರ ಪಿಎಸ್‌ಐ ನಿರ್ಲಕ್ಷ್ಯ ವಹಿಸಿದ್ದಾರೆ. ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಭೇಟಿಯಾಗಿ ದೂರು ಸಲ್ಲಿಸಿದರೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿದರು.
17 ಜನ ಪರಿಶಿಷ್ಟ ಪಂಗಡದವರು ತಾಲೂಕಿನ ಗಾರಲದಿನ್ನಿಯ ರಸ್ತೆಗೆ ಬೇಲಿ ಹಾಕಿ, ಅಸ್ಪೃಶ್ಯರು ಸರ್ಕಾರದ ರಸ್ತೆಯನ್ನು ಬಳಸದಂತೆ ಬಂದ್ ಮಾಡಿದ್ದಾರೆ. ಈ ಕುರಿತು ಸೆಪ್ಟಬಂಬರ್ 18ರಂದು ಲಲಿತಾ ವಕೀಲ ಹಾಗೂ ಸಿ.ಎಂ.ನಾರಾಯಣ ವಕೀಲರು ದೂರು ನೀಡಿದರೂ ಕೂಡ ಪ್ರಕರಣ ದಾಖಲಾಗಿಲ್ಲ. ಆರೋಪಿಗಳು ಪರಿಶಿಷ್ಟ ಪಂಗಡಕ್ಕೆ ಸೇರಿದ್ದಾರೆ. ಅವರ ವಿರುದ್ದ ಜಾತಿ ನಿಂದನೆ ಪ್ರಕರಣ ದಾಖಲಿಸಲು ಬರುವುದಿಲ್ಲ ಎಂದು ಪೊಲೀಸರು ಹೇಳುತ್ತಿದ್ದಾರೆ. ನ್ಯಾಯಾಲಯದ ತೀರ್ಪಿನಂತೆ ಪರಿಶಿಷ್ಟ ಪಂಗಡದವರ ಮೇಲೂ ಜಾತಿ ನಿಂದನೆ ದೂರು ದಾಖಲಿಸಬಹುದಾಗಿದೆ.
ಪ್ರಕರಣ ದಾಖಲಿಸಿಕೊಳ್ಳದಿದ್ದಲ್ಲಿ ಸುಪ್ರೀಂ ಕೋರ್ಟ್ ತಿರ್ಪಿನ ಅನ್ವಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆ ಕಾರ್ಯದರ್ಶಿ, ಪೊಲೀಸ್ ಮಹಾನಿರ್ದೇಶಕರ ವಿರುದ್ದ ನ್ಯಾಯಾಂಗ ನಿಂದನೆ ಪ್ರಕರಣವನ್ನು ದಾಖಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.