ರಾಯಚೂರು: ಮಳೆಗಾಲ ಬರದ ನಾಡಲ್ಲಿ ಮಳೆಗಾಲ ಆರಂಭವಾದ ಖುಷಿ ಒಂದೆಡೆಯಾದ್ರೆ ಮತ್ತೊಂದೆಡೆ ಸಾಂಕ್ರಾಮಿಕ ರೋಗದ ಭೀತಿ ಎದುರಾಗುತ್ತಿದೆ. ಇದೀಗ ಕಳೆದ ಮೂರ್ನಾಲ್ಕು ದಿನಗಳಿಂದ ಸುರಿದ ಮಳೆಯಿಂದಾಗಿ ರೋಗ-ರುಜಿನಗಳು ಹರಡುವ ಆತಂಕ ಜನರನ್ನು ಕಾಡುತ್ತಿದೆ.
ಪ್ರಸಕ್ತ ಸಾಲಿನಲ್ಲಿ ಮುಂಗಾರು ಪ್ರಾರಂಭದಲ್ಲಿ ಕೈಕೊಟ್ಟಿತ್ತು. ಇದೀಗ ಕಳೆದ ಮೂರ್ನಾಲ್ಕು ದಿನಗಳಿಂದ ಜಿಲ್ಲೆಯಾದ್ಯಂತ ಸಮರ್ಪಕವಾಗಿ ಮಳೆ ಸುರಿಯದಿದ್ದರೂ, ಅಲ್ಲಲ್ಲಿ ಮಳೆಯಾಗಿದೆ. ಹೀಗಾಗಿ ಗ್ರಾಮೀಣ, ಪಟ್ಟಣ, ನಗರ ಪ್ರದೇಶಗಳಲ್ಲಿ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ವಾಂತಿಭೇದಿ ಪ್ರಕರಣಗಳು ಬೆಳಕಿಗೆ ಬಂದಿವೆ. ಇದರ ಜೊತೆಗೆ ಮಲೇರಿಯಾ, ಡೆಂಗ್ಯೂ, ಹೆಚ್1ಎನ್1 ರೋಗಗಳು ಹರಡಿರುವುದು ಜನರಲ್ಲಿ ಆತಂಕ ಮೂಡಿಸಿದೆ.
ರಾಯಚೂರಿನಲ್ಲಿ ಮಳೆ: ಜನರಲ್ಲಿ ಸಾಂಕ್ರಾಮಿಕ ರೋಗದ ಭೀತಿ! ಜಿಲ್ಲೆಯಲ್ಲಿ 2019ರ ಜನವರಿಯಿಂದ ಜೂನ್ 30ವರೆಗೆ ವಾಂತಿಭೇದಿ-753 ಪ್ರಕರಣ, ಮಲೇರಿಯಾ-5, ಡೆಂಗ್ಯೂ-20, ಹೆಚ್1ಎನ್1-5 ಪ್ರಕರಣಗಳು ಪತ್ತೆಯಾಗಿವೆ. ಇದು ಮುಂದುವರೆಯದಂತೆ ಸಾಂಕ್ರಾಮಿಕ ರೋಗಗಳ ಬಗ್ಗೆ ಮುಂಜಾಗ್ರತೆ ಕ್ರಮಗಳನ್ನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತೆಗೆದುಕೊಂಡಿದೆ. ಆದ್ರೆ ಇದೀಗ ಮೂರ್ನಾಲ್ಕು ದಿನಗಳಿಂದ ಮಳೆ ಸುರಿದಿರುವುದರಿಂದ ಮತ್ತೆ ಸಾಂಕ್ರಾಮಿಕ ರೋಗಗಳು ಎದುರಾಗುವ ಆತಂಕ ಜನರಲ್ಲಿ ಮನೆ ಮಾಡಿದೆ.
ಇನ್ನು ಜಿಲ್ಲೆಯ ಒಟ್ಟು 50 ಪ್ರಾಥಮಿಕ ಆರೋಗ್ಯ ಕೇಂದ್ರ, 4 ಸಾರ್ವಜನಿಕ ಆಸ್ಪತ್ರೆ, 6 ಸಮುದಾಯ ಆರೋಗ್ಯ ಕೇಂದ್ರಗಳಿವೆ. ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆಯಿಲ್ಲ. ಆದ್ರೆ ಸಾರ್ವಜನಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಒಟ್ಟು 52 ವೈದ್ಯರುಗಳು ಇರಬೇಕು. ಆದ್ರೆ 26 ಜನ ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದು, ಇನ್ನೂ 26 ವೈದ್ಯರ ಕೊರತೆಯಿದೆ. ಮುಖ್ಯವಾಗಿ ಗ್ರಾಮೀಣ ಪ್ರದೇಶದಲ್ಲಿರುವ ಸಮಯದಾಯ ಆರೋಗ್ಯ ಕೇಂದ್ರ, ಸಾರ್ವಜನಿಕರ ಆಸ್ಪತ್ರೆ ವೈದ್ಯರ ಕೊರೆತೆಯಿದೆ. ಸ್ತ್ರೀ ರೋಗ, ಮಕ್ಕಳ ತಜ್ಞರು, ಆರಳವಣಿಕೆ ತಜ್ಞರ ಹುದ್ದೆಗಳು ಖಾಲಿ ಇವೆ ಎಂದು ತಿಳಿದುಬಂದಿದೆ.
ವೈದ್ಯರ ಕೊರತೆಯಿಂದಾಗಿ ಸಾರ್ವಜನಿಕರಿಗೆ ರೋಗ-ರುಜಿನಗಳು ಹರಡುವ ಭೀತಿ ಎದುರಾಗಿದೆ. ಹಾಗಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಯಾವುದೇ ರೋಗಗಳು ಹರಡದಂತೆ ಕ್ರಮ ಕೈಗೊಳ್ಳಬೇಕು ಎನ್ನುವುದು ಜನರ ಒತ್ತಾಯವಾಗಿದೆ.