ಕರ್ನಾಟಕ

karnataka

ETV Bharat / state

ಸಿಂಧನೂರು, ಮಾನ್ವಿಯಲ್ಲಿ ಮಾಜಿ ಶಾಸಕರಿಗೆ ಮಣೆ.. ದೇವದುರ್ಗದಲ್ಲಿ ಶ್ರೀದೇವಿಗೆ ಒಲಿದ ಟಿಕೆಟ್​ - ಈಟಿವಿ ಭಾರತ ಕನ್ನಡ

ಕಾಂಗ್ರೆಸ್​ ರಾಯಚೂರಿನಲ್ಲಿ ಮೂರು ಕ್ಷೇತ್ರಗಳ ಅಭ್ಯರ್ಥಿಯನ್ನು ಘೋಷಣೆ ಮಾಡಿದ್ದು, ಸಿಂಧನೂರು ವಿಧಾನಸಭಾ ಕ್ಷೇತ್ರಕ್ಕೆ ಮಾಜಿ ಶಾಸಕ ಹಂಪನಗೌಡ ಬಾದರ್ಲಿ, ಮಾನ್ವಿ ಕ್ಷೇತ್ರಕ್ಕೆ ಮಾಜಿ ಶಾಸಕ ಜಿ. ಹಂಪಯ್ಯ ನಾಯಕ ಹಾಗೂ ದೇವದುರ್ಗ ವಿಧಾನಸಭಾ ಕ್ಷೇತ್ರಕ್ಕೆ ಶ್ರೀದೇವಿ ನಾಯಕ ಅವರಿಗೆ ಟಿಕೆಟ್​ ಘೋಷಣೆ ಮಾಡಲಾಗಿದೆ.

assembly-elections-congress-announced-ticket-for-sindhanuru-manvi-devadurga
ರಾಯಚೂರು : ಸಿಂಧನೂರು, ಮಾನ್ವಿಯಲ್ಲಿ ಮಾಜಿ ಶಾಸಕರಿಗೆ ಮಣೆ.. ದೇವದುರ್ಗದಲ್ಲಿ ಶ್ರೀದೇವಿಗೆ ಒಲಿದ ಟಿಕೆಟ್​

By

Published : Apr 15, 2023, 5:01 PM IST

ರಾಯಚೂರು : ವಿಧಾನಸಭಾ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಇಂದು ತನ್ನ ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡುಗಡೆ ಮಾಡಿದ್ದು, ರಾಯಚೂರು ಜಿಲ್ಲೆಯಲ್ಲಿ ಮೂವರು ಅಭ್ಯರ್ಥಿಗಳಿಗೆ ಕಾಂಗ್ರೆಸ್​​ ಟಿಕೆಟ್​​ ಘೋಷಣೆ ಮಾಡಿದೆ. ಜಿಲ್ಲೆಯ ಸಿಂಧನೂರು ವಿಧಾನಸಭಾ ಕ್ಷೇತ್ರಕ್ಕೆ ಮಾಜಿ ಶಾಸಕ ಹಂಪನಗೌಡ ಬಾದರ್ಲಿ, ಮಾನ್ವಿ ಕ್ಷೇತ್ರಕ್ಕೆ ಮಾಜಿ ಶಾಸಕ ಜಿ. ಹಂಪಯ್ಯ ನಾಯಕ ಹಾಗೂ ದೇವದುರ್ಗ ವಿಧಾನಸಭಾ ಕ್ಷೇತ್ರಕ್ಕೆ ಶ್ರೀದೇವಿ ನಾಯಕ ಅವರಿಗೆ ಕಾಂಗ್ರೆಸ್​​​ ಮಣೆ ಹಾಕಿದೆ.

ಘೋಷಣೆಯಾದ ಮೂವರು ಅಭ್ಯರ್ಥಿಗಳಲ್ಲಿ ಇಬ್ಬರು ಮಾಜಿ ಶಾಸಕರಿಗೆ ಕಾಂಗ್ರೆಸ್​​ ಟಿಕೆಟ್​ ಘೋಷಣೆ ಮಾಡಿದ್ದು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ. ವಿ. ನಾಯಕರ ಸೊಸೆ(ತಮ್ಮನ ಪತ್ನಿ) ಶ್ರೀದೇವಿ ನಾಯಕ ಅವರಿಗೆ ಟಿಕೆಟ್ ನೀಡಿದೆ. ಈ ಮೂಲಕ ಮಹಿಳೆಯೊಬ್ಬರಿಗೆ ಕಾಂಗ್ರೆಸ್​ ಮಣೆ ಹಾಕಿದೆ.

ಮಾನ್ವಿ ಕ್ಷೇತ್ರದ ಅಭ್ಯರ್ಥಿಗಾಗಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ವಿ. ನಾಯಕ ಮತ್ತು ಶರಣಪ್ಪ ಗುಡದಿನ್ನಿ ನಾಯಕ, ಜಿ.ಹಂಪಯ್ಯ ನಾಯಕರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಆದರೆ ಅಂತಿಮವಾಗಿ ಎಐಸಿಸಿ ಕಾರ್ಯದರ್ಶಿ ಎನ್.ಎಸ್. ಬೋಸರಾಜ್ ರ ಕಟ್ಟ ಬೆಂಬಲಿಗ ಎಂದು ಬಿಂಬಿಸಿಕೊಂಡಿರುವ ಜಿ.ಹಂಪಯ್ಯ ನಾಯಕರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ.

ಸಿಂಧನೂರು ಕ್ಷೇತ್ರಕ್ಕೆ ತಾತ ಹಂಪನಗೌಡ ಬಾದರ್ಲಿ ಹಾಗೂ ಮೊಮ್ಮಗ ಬಸವನಗೌಡ ಬಾದರ್ಲಿ ಮಧ್ಯ ಟಿಕೆಟ್ ಗಾಗಿ ಪೈಪೋಟಿ ನಡೆಸಿದ್ದರು. ಆದರೆ ಕಾಂಗ್ರೆಸ್ ರಾಜ್ಯ ಯುವ ಘಟಕದ ಮಾಜಿ ಅಧ್ಯಕ್ಷರಾಗಿರುವ ಬಸವನಗೌಡ ಬಾದರ್ಲಿ ಅವರಿಗೆ ಕಳೆದ ಬಾರಿ ಟಿಕೆಟ್ ನೀಡದೆ ಇದ್ದುದರಿಂದ ಈ ಬಾರಿ ಟಿಕೆಟ್ ನೀಡಬೇಕು ಎಂದು ಹೈಕಮಾಂಡ್ ಮೇಲೆ ಒತ್ತಡ ಹೇರಲಾಗಿತ್ತು. ಹೀಗಾಗಿ ಹಂಪನಗೌಡ ಬಾದರ್ಲಿ ಅವರನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಲಾಗಿದೆ.

ದೇವದುರ್ಗ ಕ್ಷೇತ್ರಕ್ಕೆ ಮಾಜಿ ಸಂಸದ ಹಾಗೂ ಹಾಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ವಿ ನಾಯಕ ಅವರಿಗೆ ಪಕ್ಷ ಟಿಕೆಟ್ ಫೈನಲ್ ಮಾಡಿತ್ತು. ಆದರೆ ಬಿ.ವಿ.ನಾಯಕರಿಗೆ ದೇವದುರ್ಗದಿಂದ ಸ್ಪರ್ಧೆ ಮಾಡಲು ಆಸಕ್ತಿ ಇರಲಿಲ್ಲ. ಹೀಗಾಗಿ ಮಾನ್ವಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಕಸರತ್ತು ನಡೆಸಿದ್ದರು. ಇವರು ಸ್ಫರ್ಧಿಸದಿರುವ ಕಾರಣ ಇವರ ತಮ್ಮನ ಪತ್ನಿ ಶ್ರೀದೇವಿನಾಯಕ ಅವರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದೆ. ಈ ಹಿಂದೆ ದೇವದುರ್ಗದಲ್ಲಿ ಉಪಚುನಾವಣೆ ನಡೆದಾಗ ಶ್ರೀದೇವಿನಾಯಕ ಅವರ ಪತಿ ರಾಜಶೇಖರ ನಾಯಕ ಪರಾಜಿತಗೊಂಡಿದ್ದರು.

ಈ ಹಿಂದೆ ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ ಮಾಡಿದಾಗ ರಾಯಚೂರು ಗ್ರಾಮೀಣ, ಮಸ್ಕಿ ಎರಡು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನಾಗಿ ಘೋಷಣೆ ಮಾಡಿ, ಐದು ಕ್ಷೇತ್ರಗಳನ್ನು ಬಾಕಿ ಉಳಿಸಿತ್ತು. ಇಂದು ಬಿಡುಗಡೆಯಾದ ಪಟ್ಟಿಯಲ್ಲಿ ಉಳಿದ ಐದು ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮಗೊಳಿಸಬಹುದು ಎಂಬ ನಿರೀಕ್ಷೆಯಿತ್ತು. ಇದುವರೆಗೆ ಐದು ಕ್ಷೇತ್ರಗಳಿಗೆ ಟಿಕೆಟ್​ ಘೋಷಣೆ ಮಾಡಿದ್ದು, ರಾಯಚೂರು ನಗರ ಮತ್ತು ಲಿಂಗಸೂಗೂರು ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳನ್ನು ಇನ್ನೂ ಘೋಷಣೆ ಮಾಡಿಲ್ಲ.

ಇದನ್ನೂ ಓದಿ :ದ.ಕನ್ನಡ ಜಿಲ್ಲೆಯ 2 ಕ್ಷೇತ್ರಗಳಿಗೆ ಕೈ ಅಭ್ಯರ್ಥಿಗಳ ಘೋಷಣೆ: ಕುತೂಹಲ ಕೆರಳಿಸಿದ ಮಂಗಳೂರು ಉತ್ತರ ಕ್ಷೇತ್ರ ಟಿಕೆಟ್​

ABOUT THE AUTHOR

...view details