ಬೆಂಗಳೂರು: ರಾಜ್ಯದ ಎರಡು(ಸಿಂದಗಿಗೆ ಇನ್ನಷ್ಟೇ ಚುನಾವಣೆ ಘೋಷಣೆಯಾಗಬೇಕಿದೆ) ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಸಮ್ಮತಿ ಮೇರೆಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮುಕುಲ್ ವಾಸ್ನಿಕ್, ರಾಜ್ಯದ ಮೂರು ಕ್ಷೇತ್ರಗಳ ವಿಧಾನಸಭೆ ಉಪಚುನಾವಣೆಗೆ ಅಭ್ಯರ್ಥಿಗಳ ಹೆಸರು ಪ್ರಕಟಿಸಿದ್ದಾರೆ.
ಎರಡು ದಿನಗಳ ಹಿಂದಷ್ಟೇ ಮಸ್ಕಿ ಹಾಗೂ ಬಸವಕಲ್ಯಾಣ ಕ್ಷೇತ್ರಗಳ ಉಪಚುನಾವಣೆ ದಿನಾಂಕ ಪ್ರಕಟವಾಗಿದೆ. ಏಪ್ರಿಲ್ 17ರಂದು ಎರಡು ಕ್ಷೇತ್ರ ಗಳಿಗೆ ಮತದಾನ ನಡೆಯಲಿದೆ. ಎರಡು ಕ್ಷೇತ್ರಗಳ ಜೊತೆಗೆ ಸದ್ಯವೇ ಘೋಷಣೆಯಾಗಲಿರುವ ಸಿಂದಗಿ ವಿಧಾನಸಭೆ ಕ್ಷೇತ್ರಕ್ಕೆ ತನ್ನ ಅಭ್ಯರ್ಥಿಯನ್ನು ಕಾಂಗ್ರೆಸ್ ಪ್ರಕಟಿಸಿದೆ.
ನಿರೀಕ್ಷೆಯಂತೆ ಅಭ್ಯರ್ಥಿಗಳ ಆಯ್ಕೆ: ಮಸ್ಕಿ ವಿಧಾನಸಭೆ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಸವನಗೌಡ ತುರುವಿಹಾಳ್, ಬಸವಕಲ್ಯಾಣ ವಿಧಾನಸಭೆ ಕ್ಷೇತ್ರಕ್ಕೆ ಮಲ್ಲಮ್ಮ ನಾರಾಯಣರಾವ್ ಆಯ್ಕೆಯಾಗಿದ್ದಾರೆ. ಇನ್ನು ಎಂಸಿ ಮನಗೂಳಿ ನಿಧನದಿಂದ ತೆರವಾಗಿರುವ ಸಿಂದಗಿ ವಿಧಾನಸಭೆ ಕ್ಷೇತ್ರಕ್ಕೆ ಅಶೋಕ್ ಮನಗೂಳಿ ಆಯ್ಕೆಯಾಗಿದ್ದಾರೆ.
ಮಸ್ಕಿ ವಿಧಾನಸಭೆ ಕ್ಷೇತ್ರಕ್ಕೆ 2018ರಲ್ಲಿ ನಡೆದ ಚುನಾವಣೆಯಲ್ಲಿ ಕೇವಲ 213 ಮತಗಳಿಂದ ಪ್ರತಾಪ್ ಗೌಡ ಪಾಟೀಲ್ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದರು. ಬಸವನಗೌಡ ತುರುವಿಹಾಳ್ ಕೆಲ ತಿಂಗಳ ಹಿಂದೆ ಬಿಜೆಪಿಯಿಂದ ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಇವರೇ ಅಭ್ಯರ್ಥಿಯಾಗಲಿದ್ದಾರೆ ಎಂದು ಹೇಳಲಾಗಿತ್ತು. ಇದೀಗ ಪಕ್ಷದಿಂದಲೂ ಅಂತಿಮ ಪಟ್ಟಿ ಪ್ರಕಟವಾಗಿದೆ.
ಬಸವಕಲ್ಯಾಣ ಕಾಂಗ್ರೆಸ್ ಶಾಸಕ ಬಿ ನಾರಾಯಣರಾವ್ ಕೊರೊನಾದಿಂದಾಗಿ ಮೃತಪಟ್ಟ ಹಿನ್ನೆಲೆ ತೆರವಾಗಿದ್ದ ಕ್ಷೇತ್ರಕ್ಕೆ ಅವರ ಪತ್ನಿ ಮಲ್ಲಮ್ಮ ನಾರಾಯಣರಾವ್ಗೆ ಟಿಕೆಟ್ ನೀಡಲಾಗಿದೆ.
ಇನ್ನು ಕಳೆದ ವಾರವಷ್ಟೇ ಜೆಡಿಎಸ್ ತ್ಯಜಿಸಿ ಕಾಂಗ್ರೆಸ್ ಪಕ್ಷ ಸೇರಿದ್ದ ಅಶೋಕ್ ಮನಗೂಳಿ ಸಹ ಸಿಂದಗಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಗಲಿದ್ದಾರೆ ಎಂದು ತಿಳಿಸಲಾಗಿತ್ತು. ನಿರೀಕ್ಷೆಯಂತೆ ಅವರೇ ಅಭ್ಯರ್ಥಿಯಾಗಿ ಘೋಷಿತರಾಗಿದ್ದಾರೆ. ಜೆಡಿಎಸ್ ಶಾಸಕರಾಗಿದ್ದ ಎಂಸಿ ಮನಗೂಳಿ ನಿಧನದಿಂದ ತೆರವಾಗಿರುವ ಕ್ಷೇತ್ರಕ್ಕೆ ಇದೀಗ ಅವರ ಪುತ್ರ ಕಾಂಗ್ರೆಸ್ನಿಂದ ಸ್ಪರ್ಧಿಸಲಿದ್ದಾರೆ.
ಲೋಕಸಭೆಗೆ ಅಭ್ಯರ್ಥಿ ಪ್ರಕಟವಾಗಿಲ್ಲ:
ಬೆಳಗಾವಿ ಲೋಕಸಭೆ ಉಪಚುನಾವಣೆಗೆ ಅಭ್ಯರ್ಥಿ ಹೆಸರನ್ನು ಕಾಂಗ್ರೆಸ್ ಹೈಕಮಾಂಡ್ ಇದುವರೆಗೂ ಪ್ರಕಟಿಸಿಲ್ಲ. ಏಪ್ರಿಲ್ 17ರಂದು ಈ ಕ್ಷೇತ್ರಕ್ಕೂ ಸಹ ಮತದಾನ ನಡೆಯಲಿದೆ. ಬಿಜೆಪಿಯಿಂದ ಆಯ್ಕೆಯಾಗಿ ಕೇಂದ್ರ ಸಚಿವರಾಗಿದ್ದ ಸುರೇಶ್ ಅಂಗಡಿ ನಿಧನದಿಂದ ತೆರವಾಗಿದ್ದ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ಪಕ್ಷದಿಂದ ಸತೀಶ್ ಜಾರಕಿಹೊಳಿ ಸೇರಿದಂತೆ ಮೂವರ ಹೆಸರು ಸಂಭವನೀಯ ಅಭ್ಯರ್ಥಿಗಳ ರೂಪದಲ್ಲಿ ಕೇಳಿಬರುತ್ತಿದೆ.