ಅನ್ನಭಾಗ್ಯ ಯೋಜನೆ : ರಾಯಚೂರಿನಲ್ಲಿ 49,505 ಫಲಾನುಭವಿಗಳಿಗೆ ವರ್ಗಾವಣೆ ಆಗಿಲ್ಲ ಹಣ ರಾಯಚೂರು: ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಐದು ಕೆಜಿ ಅಕ್ಕಿ ಬದಲಿಗೆ ಹಣ ಪಾವತಿ ಮಾಡಲು ರಾಜ್ಯ ಸರ್ಕಾರ ಚಾಲನೆ ನೀಡಿದೆ. ಆದರೆ ರಾಯಚೂರು ಜಿಲ್ಲೆಯ ಸಾವಿರಾರು ಜನ ಪಡಿತರ ಚೀಟಿದಾರರು ಈ ತಿಂಗಳ ಹಣ ಪಡೆಯುವಲ್ಲಿ ವಂಚಿತರಾಗಿದ್ದಾರೆ. ಮುಂದಿನ ತಿಂಗಳು ಹಣ ಪಡೆಯಲು ಪಡಿತರ ಚೀಟಿಗೆ ಬ್ಯಾಂಕ್ ಖಾತೆ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ.
ಸರ್ಕಾರದ ಗ್ಯಾರಂಟಿ ಯೋಜನೆ ಅನ್ನಭಾಗ್ಯದ ಸಂಪೂರ್ಣ ಅನುಷ್ಠಾನಕ್ಕೆ ಅಕ್ಕಿ ಕೊರತೆ ಎದುರಾದ ಹಿನ್ನೆಲೆ ಮುಖ್ಯಮಂತ್ರಿ ಸಿದ್ದರಾಮಯ್ಯ 5 ಕೆ.ಜಿ ಅಕ್ಕಿ ಬದಲು ಫಲಾನುಭವಿಗಳ ಖಾತೆಗೆ 170 ರೂಪಾಯಿ ನೇರ ಹಣ ವರ್ಗಾವಣೆ ಮಾಡಲು ತೀರ್ಮಾನಿಸಿದ್ದರು. ಈ ಸಂಬಂಧ ಈಗಾಗಲೇ ಹಲವು ಫಲಾನುಭವಿಗಳಿಗೆ ಹಣ ವರ್ಗಾವಣೆ ಮಾಡಲಾಗಿದೆ. ಆದರೆ ಜಿಲ್ಲೆಯಲ್ಲಿ 49,505 ಪಡಿತರ ಚೀಟಿದಾರರಿಗೆ ನಗದು ಹಣ ವರ್ಗಾವಣೆ ಆಗಿಲ್ಲ.
ಪಡಿತರ ಚೀಟಿಗೆ ಬ್ಯಾಂಕ್ ಅಕೌಂಟ್ ಹಾಗೂ ಆಧಾರ್ ಲಿಂಕ್ ಮಾಡದ ಹಿನ್ನೆಲೆ ಹಣ ಪಡೆಯಲು ಅನರ್ಹರಾಗಿದ್ದಾರೆ. ಹೀಗಾಗಿ ಜೂನ್ ತಿಂಗಳಿನ 5 ಕೆ.ಜಿ ಅಕ್ಕಿ ಬದಲಿಗೆ 170 ರೂ. ನಗದು ಹಣ ಖಾತೆಗೆ ಜಮೆ ಆಗಿಲ್ಲ. ಜುಲೈ 21ರೊಳಗೆ ಬ್ಯಾಂಕ್ ಖಾತೆ, ಆಧಾರ್ ಸಂಖ್ಯೆ ಪಡಿತರ ಚೀಟಿಗೆ ಜೋಡಣೆಯಾಗದಿದ್ದರೆ ಆಗಸ್ಟ್ ತಿಂಗಳಲ್ಲೂ ಫಲಾನುಭವಿಗಳಿಗೆ ಹಣ ಸಿಗುವುದು ಡೌಟ್ ಎನ್ನಲಾಗುತ್ತಿದೆ. ಹೀಗಾಗಿ ಫಲಾನುಭವಿಗಳು ಸರ್ಕಾರ, ಅಧಿಕಾರಿಗಳು ಹಾಗೂ ನ್ಯಾಯಬೆಲೆ ಅಂಗಡಿಯವರು ಸರಿಯಾಗಿ ಜಾಗೃತಿ ಮೂಡಿಸಬೇಕೆಂದು ಒತ್ತಾಯಿಸಿದ್ದಾರೆ.
ರಾಯಚೂರು ಜಿಲ್ಲೆಯಲ್ಲಿ ಅಂತ್ಯೋದಯ ಅನ್ನ ಯೋಜನೆ ಹಾಗೂ ಆದ್ಯತಾ ಪಡಿತರ ಚೀಟಿದಾರರು ಒಟ್ಟು 4,53,425 ಇದ್ದಾರೆ. ಇದರಲ್ಲಿ 4,03,920 ಪಡಿತರ ಚೀಟಿಗಳು ಹಣ ಪಡೆಯಲು ಅರ್ಹವಾಗಿವೆ. ಈಗಾಗಲೇ 3,37,286 ಕಾರ್ಡುದಾರರ ಖಾತೆಗೆ ಒಟ್ಟು 19 ಕೋಟಿ 71 ಲಕ್ಷ 69,400 ರೂಪಾಯಿ ಹಣ ಜಮಾವಾಗಿದೆ. ಆದರೆ ಜಿಲ್ಲೆಯಲ್ಲಿ 8,353 ಕಾರ್ಡುದಾರರ ಬ್ಯಾಂಕ್ ಖಾತೆಗಳು ನಿಷ್ಕ್ರಿಯವಾಗಿದ್ದು, 40,925 ಜನ ಕಾರ್ಡುದಾರರು ಬ್ಯಾಂಕ್ ಖಾತೆಯನ್ನೇ ಹೊಂದಿಲ್ಲ. ಉಳಿದ 227 ಜನ ಆಧಾರ ಲಿಂಕ್ ಮಾಡಿಲ್ಲ. ಈ ರೀತಿ ಒಟ್ಟು 49,505 ಜನ ಪಡಿತರ ಚೀಟಿ ಹೊಂದಿದ ಕುಟುಂಬ ಮುಖ್ಯಸ್ಥರ ಖಾತೆಗೆ ಹಣ ವರ್ಗಾವಣೆ ಆಗಿಲ್ಲ. ಕೂಡಲೇ ಬ್ಯಾಂಕ್ ಖಾತೆ, ಆಧಾರ್ ಮಾಹಿತಿ ನೀಡಿದರೆ ಮುಂದಿನ ತಿಂಗಳ ಹಣ ಜಮಾ ಮಾಡಲು ಕ್ರಮವಹಿಸುವುದಾಗಿ ಆಹಾರ ಮತ್ತು ನಾಗರಿಕ ಸರಬರಾಜು ಉಪನಿರ್ದೇಶಕ ಕೃಷ್ಣ ಅವರು ತಿಳಿಸಿದ್ದಾರೆ.
ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಅನ್ನಭಾಗ್ಯದ ಯೋಜನೆಯಡಿ ಅಕ್ಕಿ ಬದಲು ಹಣ ಬರುತ್ತದೆ ಎಂದು ಕಾಯುತ್ತಿದ್ದ ಸಾವಿರಾರು ಜನ ಫಲಾನುಭವಿಗಳಿಗೆ ನಿರಾಸೆಯಾಗಿದೆ. ಜೊತೆಗೆ ಬಹಳಷ್ಟು ಅನಕ್ಷರಸ್ಥ ಫಲಾನುಭವಿಗಳು ಮಾಹಿತಿಯಿಲ್ಲದೆ ಈಗ ಬ್ಯಾಂಕ್ ಖಾತೆ ತೆರೆಯಲು ಮುಂದಾಗಿದ್ದಾರೆ.
ಇದನ್ನೂ ಓದಿ :Gruha Lakshmi Scheme: ಇಂದಿನಿಂದ ಗೃಹಲಕ್ಷ್ಮಿ ಯೋಜನೆ: ಯಾರು ಅರ್ಹರು? ನೋಂದಣಿ ಎಲ್ಲಿ? ಬೇಕಿರುವ ದಾಖಲೆಗಳೇನು? ಸಂಪೂರ್ಣ ಮಾಹಿತಿ