ರಾಯಚೂರು:ಕಾಂಗ್ರೆಸ್ ಕರ್ನಾಟಕವನ್ನು ಎಟಿಎಂಯನ್ನಾಗಿ ಮಾಡಿಕೊಂಡಿತ್ತು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೇರವೇರಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ಅಧಿಕಾರದಲ್ಲಿ ಇರುವಾಗ ಒಳ್ಳೆಯ ಸರ್ಕಾರ ನೀಡಿದೆಯಾ ಎಂದು ಪ್ರಶ್ನಿದ ಅವರು, ಕರ್ನಾಟಕವನ್ನು ಕಾಂಗ್ರೆಸ್ ಅಭಿವೃದ್ಧಿ ಮಾಡಿಲ್ಲ. ಬದಲಾಗಿ ರಾಜ್ಯವನ್ನು ಎಟಿಎಂ ತರಹ ಮಾಡಿಕೊಂಡು ಬಳಸಿಕೊಂಡಿತ್ತು ಎಂದು ಆರೋಪಿಸಿದರು. ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಅಭಿವೃದ್ಧಿಗೆ 4500 ಕೋಟಿ ರೂಪಾಯಿ ನೀಡಲಾಗಿದೆ. ಜಲಜೀವನ ಮಿಷನ್ ಯೋಜನೆ, ಕೃಷ್ಣ ಜಲಭಾಗ್ಯ ನಿಗಮ, ಲೋಕೋಪಯೋಗಿ ಸೇರಿದಂತೆ ಹಲವು ಇಲಾಖೆ ಕಾಮಗಾರಿ ಉದ್ಘಾಟಿಸಿರುವುದು ಸಂತೋಷವಾಗುತ್ತಿದ್ದು, ಬಿಜೆಪಿಯಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.
ಮೈತ್ರಿ ಸರ್ಕಾರಕ್ಕೆ ಅವಕಾಶ ನೀಡಬೇಡಿ - ಅಮಿತ್ ಶಾ:ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಬರುವುದಕ್ಕೆ ಅವಕಾಶ ನೀಡಬೇಡಿ. ರಾಜ್ಯದ ಅಭಿವೃದ್ಧಿಗಾಗಿ ಭಾರತೀಯ ಜನತಾ ಪಾರ್ಟಿಗೆ ಬೆಂಬಲಿಸಿ, ಸಂಪೂರ್ಣ ಬಹುಮತದಿಂದ ಅಧಿಕಾರ ನೀಡಬೇಕು ಎಂದು ಮನವಿ ಮಾಡಿದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ದೇಶದ ಆರ್ಥಿಕತೆಯನ್ನು ಐದು ಟ್ರಿಲಿಯನ್ ಡಾಲರ್ಗೆ ಕೊಂಡೊಯ್ಯುವ ಗುರಿಯನ್ನು ಹೊಂದಿದೆ ಎಂದರು.
ಪಾಕಿಸ್ತಾನ ಭಾರತದ ದೇಶದಲ್ಲಿ ಪುಲ್ವಾಮಾ ದಾಳಿ ನಡೆಸಿತ್ತು. ಅದಕ್ಕೆ ಪ್ರತ್ಯುತ್ತರವಾಗಿ ನರೇಂದ್ರ ಮೋದಿ ನೇತೃತ್ವದ ನಮ್ಮ ಸರ್ಕಾರದಲ್ಲಿ ನಮ್ಮ ಸೈನಿಕರು ಪಾಕಿಸ್ತಾನದೊಳಗೆ ನುಗ್ಗಿ ತಕ್ಕ ಉತ್ತರವನ್ನು ನೀಡಿದ್ದರು. ದೇಶದ ಜನತೆ ಹಾಗೂ ಬಡ ಜನರ ಅಭಿವೃದ್ಧಿಗಾಗಿ ಉಜ್ವಲ ಯೋಜನೆ, ಮನೆಗಳಿಗೆ ಶೌಚಾಲಯ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಕೊರೊನಾ ಸಾಂಕ್ರಾಮಿಕ ತಡೆಯುವ ಹಿನ್ನೆಲೆಯಲ್ಲಿ ದೇಶದ ಜನತೆ ಎಲ್ಲರಿಗೂ ಉಚಿತವಾಗಿ ಎರಡು ಡೋಸ್ ವ್ಯಾಕ್ಸಿನ್ ನೀಡಲಾಗಿದೆ ಎಂದು ಹೇಳಿದರು.