ರಾಯಚೂರು: ಜಿಲ್ಲೆಯಲ್ಲಿ ಮುಂಗಾರು ಮಳೆ ಶುರುವಾಗಿದ್ದು, ರೈತರಿಂದ ಕೃಷಿ ಚಟುವಟಿಕೆಗಳ ಪ್ರಕ್ರಿಯೆ ಚುರುಕುಗೊಂಡಿದೆ. ರೈತರು ಜಮೀನು ಹದ ಮಾಡಿಕೊಂಡು ಬಿತ್ತನೆ ಕಾರ್ಯಕ್ಕೆ ತಯಾರಿ ನಡೆಸುತ್ತಿದ್ದಾರೆ.
ಜಿಲ್ಲೆಯಲ್ಲಿ ಈಗಾಗಲೇ ಮುಂಗಾರು ಮಳೆ ಪ್ರವೇಶವಾಗಿದ್ದು, ಸರಾಸರಿ 80 ಮಿ.ಮೀ. ಮಳೆ ಸುರಿದಿದೆ. ಮುಂಗಾರು ಹಂಗಾಮು ಬಿತ್ತನೆಗೆ ಹೊಲದಲ್ಲಿ ಮಡಿಕೆ, ಕೊಟೆ ಹೊಡೆಯುವುದು ಸೇರಿದಂತೆ ಹೊಲವನ್ನು ಹದ ಮಾಡಿಕೊಳ್ಳುವ ಕಾರ್ಯ ಭರದಿಂದ ಸಾಗಿದೆ.
ಜಿಲ್ಲೆಯ ಮುಂಗಾರು ಹಂಗಾಮಿಗೆ ಬಿತ್ತನೆಯಾಗುವ ಬೆಳೆಗಳು:
ಮುಂಗಾರು ಹಂಗಾಮಿನ ಅವಧಿಗೆ ಜಿಲ್ಲೆಯಲ್ಲಿ ಭತ್ತ, ಸಜ್ಜೆ, ತೊಗರಿ, ಹತ್ತಿ ಬೆಳೆಗಳನ್ನ ಪ್ರಮುಖವಾಗಿ ಬೆಳೆಯಲಾಗುತ್ತಿದೆ. ಸಿಂಧನೂರು, ಮಾನವಿ, ಮಸ್ಕಿ, ಸಿರವಾರ ತುಂಗಭದ್ರಾ ಎಡದಂಡೆ ಕಾಲುವೆ (ಟಿಎಲ್ಬಿಸಿ) ವ್ಯಾಪ್ತಿಗೆ ಬರುವ ಪ್ರದೇಶ ಹಾಗೂ ನಾರಾಯಣಪುರ ಬಲದಂಡೆ ನಾಲಾ ಯೋಜನೆ (ಎನ್ಆರ್ಬಿಸಿ) ವ್ಯಾಪ್ತಿಗೆ ಬರುವಂತಹ ನೀರವಾರಿ ಪ್ರದೇಶದಲ್ಲಿ ಹೆಚ್ಚಾಗಿ ಭತ್ತವನ್ನ ಬೆಳೆಯಲಾಗುತ್ತಿದೆ. ಉಳಿದಂತೆ ತೊಗರಿ, ಸಜ್ಜೆ, ಹತ್ತಿ ಬೆಳೆಯನ್ನ ಹೇರಳವಾಗಿ ರೈತರು ಬಿತ್ತನೆ ಮಾಡುತ್ತಾರೆ.
ಮುಂಗಾರು ಹಂಗಾಮಿನ ಬಿತ್ತನೆ ಗುರಿ:
2021-2022ನೇ ಸಾಲಿನ ಮುಂಗಾರು ಹಂಗಾಮಿಗೆ ಭತ್ತ 1.57 ಲಕ್ಷ ಹೆಕ್ಟರ್, ತೊಗರಿ 1 ಲಕ್ಷ ಹೆಕ್ಟರ್, ಹತ್ತಿ 1.55 ಹೆಕ್ಟರ್, ಸಜ್ಜೆ 40 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಜಿಲ್ಲೆಯಲ್ಲಿ 32 ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜಗಳನ್ನ ದಾಸ್ತಾನು ಮಾಡಿಕೊಳ್ಳಲಾಗಿದೆ. ಇದರ ಜತೆಗೆ ರಸಗೊಬ್ಬರ ಸರಬರಾಜು ದಾಸ್ತಾನಿದ್ದು, ರೈತರಿಗೆ ಹಳೆ ದರಕ್ಕೆ ಮಾರಾಟ ಮಾಡಬೇಕು. ಕಳಪೆ ಬೀಜ, ಹೆಚ್ಚಿನ ದರದಲ್ಲಿ ರಸಗೊಬ್ಬರ, ಬೀಜದ ವ್ಯಾಪಾರಿಗಳು ಮಾರಾಟ ಮಾಡುವ ದೂರುಗಳು ಕಂಡು ಬಂದ್ರೆ ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಳ್ಳುವುದಾಗಿ ಕೃಷಿ ಇಲಾಖೆ ಜಂಟಿ ನಿರ್ದೇಶಕರು ಎಚ್ಚರಿಸಿದ್ದಾರೆ.