ರಾಯಚೂರು: ಮಂತ್ರಾಲಯದ ಶ್ರೀಮಠಕ್ಕಾಗಿ ಏರೋಡ್ರೋಮ್ ಯೋಜನೆ ತರಬೇಕೆನ್ನುವ ಬಹುದೊಡ್ಡ ಆಸೆಯಿದೆ ಎಂದು ನಟ ಹಾಗೂ ರಾಜ್ಯಸಭಾ ಸದಸ್ಯ ಜಗ್ಗೇಶ್ ಹೇಳಿದ್ದಾರೆ. ಮಂತ್ರಾಲಯದ ಶ್ರೀಗುರು ರಾಯರ 351ನೇ ಆರಾಧನಾ ಮಹೋತ್ಸವದಲ್ಲಿ ಭಾಗಿಯಾಗಿ, ಶ್ರೀಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರ ಭೇಟಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.
ಈಗಿನ ಪೀಠಾಧಿಪತಿಗಳ ನೇತೃತ್ವದಲ್ಲಿ ಮಠದ ಘನತೆ ಹೆಚ್ಚುತ್ತಿದೆ. ನನಗೆ ವೈಯಕ್ತಿಕವಾಗಿ ಇರುವ ದೊಡ್ಡ ಆಸೆ ಎಂದರೆ ಮಠಕ್ಕೆ ಒಂದು ಏರೋಡ್ರೋಮ್ ಬರಬೇಕು. ನಾವೇನು ಮಾಡುವುದಿಲ್ಲ, ರಾಯರೇ ಅದನ್ನೇ ಮಾಡಿಸುತ್ತಾರೆ. ರಾಯರ ಮೇಲೆ ಭಾರ ಹಾಕಿ ನಾನು ಈ ವಿಷಯವನ್ನು ಮುಂದಕ್ಕೆ ತೆಗೆದುಕೊಂಡು ಹೋಗುತ್ತೇನೆ ಎಂದರು.
ಅಧಿಕಾರ ಬಂದಾಗ ಯಾರೂ ತಮ್ಮ ಕೈ ಗಲೀಜು ಮಾಡಿಕೊಳ್ಳುತ್ತಾರೋ ಅವರನ್ನು ರಾಯರು ಕ್ಷಮಿಸಲ್ಲ. ಅಂಥವರು ಮುಂದೆ ಬೆತ್ತಲಾಗಿ ನಿಲ್ಲಬೇಕಾಗುತ್ತದೆ. ಸದ್ಭಾವವನೆಯಿಂದ ಕೆಲಸ ಮಾಡಬೇಕು. ನನ್ನ ಬಳಿ 39 ರೂಪಾಯಿ ಬಸ್ ಚಾರ್ಜ್ಗೂ ಹಣವಿರಲಿಲ್ಲ. ಈಗ ದೊಡ್ಡ ನಟನಾಗಿ, ರಾಜ್ಯಸಭಾ ಸದಸ್ಯನಾಗಿದ್ದೇನೆ. ಅದಕ್ಕೆ ರಾಯರ ಆಶೀರ್ವಾದವೇ ಕಾರಣ ಎಂದು ಹೇಳಿದರು.