ರಾಯಚೂರು:ಹಣದ ವಿಚಾರವಾಗಿ ಮಗನೇ ತಂದೆಯನ್ನು ಕೊಲೆ ಮಾಡಿ ಹೂತಿಟ್ಟಿರುವ ಆತಂಕಕಾರಿ ಘಟನೆ ಜಿಲ್ಲೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ರಾಯಚೂರು ತಾಲೂಕಿನ ವಡ್ಲೂರು ಗ್ರಾಮದಲ್ಲಿ ಈ ಪ್ರಕರಣ ನಡೆದಿದೆ. ಶಿವನಪ್ಪ(65) ಮಗನಿಂದ ಕೊಲೆಯಾಗಿರುವ ತಂದೆ ಎಂದು ತಿಳಿದುಬಂದಿದೆ. 35 ವರ್ಷದ ಮಗ ಈರಣ್ಣ ಕೊಲೆ ಮಾಡಿರುವ ಆರೋಪಿ.
ಜುಲೈ 07ರಂದು ಕೊಲೆ ಮಾಡಿ, ವಡ್ಲೂರು ಕ್ರಾಸ್ನ ಹತ್ತಿರ ಹೊಸದಾಗಿ ನಿರ್ಮಾಣ ಮಾಡುತ್ತಿರುವ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಹೂತಿಟ್ಟಿದ್ದಾನೆ. ಬಳಿಕ ತಾನೇ ಸ್ವತಃ ತಂದೆ ಕಾಣೆಯಾಗಿರುವ ಕುರಿತು ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.
ಖುದ್ದಾಗಿ ಠಾಣೆಗೆ ಬಂದ ಆರೋಪಿ: ಇದಾದ ನಂತರ ಇಂದು ಪ್ರಕರಣ ಬೆಳಕಿಗೆ ಬಂದಿದ್ದು, ಗ್ರಾಮೀಣ ಠಾಣೆಗೆ ಖುದ್ದಾಗಿ ಆರೋಪಿಯೇ ಬಂದಿದ್ದಾನೆ. ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಪರಿಸ್ಥಿತಿ ವಿಕೋಪಕ್ಕೆ ಹೋಗಿ ಕೊಲೆ: ಹಣಕ್ಕಾಗಿ ಆರೋಪಿ ಮಗ ಯಾವಾಗಲೂ ತಂದೆಯನ್ನ ಪೀಡಿಸುತ್ತಿದ್ದನಂತೆ. ಹಣ ನೀಡಿದ ವಿಚಾರಕ್ಕೆ ತಂದೆ ಹಾಗೂ ಮಗನ ನಡುವೆ ಜಗಳವಾಗಿ, ಪರಿಸ್ಥಿತಿ ವಿಕೋಪಕ್ಕೆ ಹೋಗಿ ಕೊಲೆ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ. ಈ ಘಟನೆಗೆ ಸಂಬಂಧಿಸಿದಂತೆ ರಾಯಚೂರು ಪೊಲೀಸ್ ಠಾಣೆ ಪಿಎಸ್‌ಐ, ಸಿಪಿಐ ಹಾಗೂ ಡಿವೈಎಸ್ಪಿಯನ್ನು ದೂರವಾಣಿ ಕರೆ ಮೂಲಕ ಸಂಪರ್ಕಿಸಿದಾಗ ಕರೆಯನ್ನು ಸ್ವೀಕರಿಸಿಲ್ಲ.
ಮದ್ಯ ವ್ಯಸನಿ ಮಗನಿಗೆ ಬೆಂಕಿ ಹಚ್ಚಿ ಕೊಂದ ತಾಯಿ:ಇನ್ನೊಂದೆಡೆ ಮದ್ಯಪಾನ ಚಟಕ್ಕೆ ದಾಸನಾಗಿದ್ದ ಮಗನನ್ನ ತಾಯಿಯೊಬ್ಬಳು ಪೆಟ್ರೋಲ್ ಎರಚಿ ಸುಟ್ಟು ಹಾಕಿರುವ ಘಟನೆ (ಜುಲೈ 18-2023)ರ ಸೋಮವಾರ ಸಂಜೆ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. ಚಾಂದ್ ಪಾಷಾ (40) ಕೊಲೆಯಾದ ವ್ಯಕ್ತಿ ಎಂಬುದು ತಿಳಿದುಬಂದಿತ್ತು. ಆತನ ತಾಯಿ ಸೋಫಿಯಾಳನ್ನ ಪೊಲೀಸರು ವಶಕ್ಕೆ ಪಡೆದಿದ್ದರು.
ತಾಯಿ ಜೊತೆಯೂ ಗಲಾಟೆ ಮಾಡಿದ್ದ ಮಗ:ಪ್ರತಿ ದಿನ ಕುಡಿದು ಬಂದು ಮನೆಯ ಸದಸ್ಯರ ಮೇಲೆ ಹಲ್ಲೆ ಮಾಡುತ್ತಿದ್ದ ಚಾಂದ್ ಪಾಷಾನ ಉಪಟಳದಿಂದ ಬೇಸತ್ತಿದ್ದ ಆತನ ಪತ್ನಿ ಬಿಟ್ಟು ಹೋಗಿದ್ದಳು. ಹೀಗಾಗಿ ಪಾಷಾ ತನ್ನ ತಾಯಿ ಜೊತೆ ವಾಸವಾಗಿದ್ದ. ಸೋಮವಾರ ಕುಡಿದುಕೊಂಡು ಬಂದು ತಾಯಿ ಜೊತೆಯೂ ಗಲಾಟೆ ಮಾಡಿದ್ದ. ಬಳಿಕ ಸಂಜೆ 4:45ರ ಸುಮಾರಿಗೆ ಮತ್ತೆ ಕಂಠಪೂರ್ತಿ ಕುಡಿದು ಬಂದು ಮನೆಯ ಹೊರಗಡೆ ಕುಳಿತಿದ್ದ.
ಸೋಲದೇವನಹಳ್ಳಿ ಠಾಣೆಯಲ್ಲಿ ಪ್ರಕರಣ:ಸಿಟ್ಟಿಗೆದ್ದ ಆತನ ತಾಯಿ ಅವನ ಮೇಲೆ ಪೆಟ್ರೋಲ್ ಎರಚಿ ಬೆಂಕಿ ಹಚ್ಚುವುದಾಗಿ ಭಯಪಡಿಸಲು ಯತ್ನಿಸಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದಾಗ ಬೆಂಕಿ ಹಚ್ಚಿದ್ದಾಳೆ. ಪರಿಣಾಮ ಚಾಂದ್ ಪಾಷಾ ಸ್ಥಳದಲ್ಲೇ ಸುಟ್ಟು ಮೃತಪಟ್ಟಿದ್ದಾನೆ. ಘಟನೆ ಸಂಬಂಧ ಸೋಲದೇವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ತಾಯಿ ಸೋಫಿಯಾಳನ್ನು ಬಂಧಿಸಿರುವುದಾಗಿ ಉತ್ತರ ವಿಭಾಗದ ಡಿಸಿಪಿ ಶಿವಪ್ರಕಾಶ್ ದೇವರಾಜು ತಿಳಿಸಿದ್ದರು.
ಇದನ್ನೂ ಓದಿ:Bengaluru crime: ಮದ್ಯ ವ್ಯಸನಿ ಮಗನಿಗೆ ಬೆಂಕಿ ಹಚ್ಚಿ ಕೊಂದ ತಾಯಿ