ರಾಯಚೂರು: ಮಹಿಳೆಯೊಬ್ಬರು ಬೆಂಕಿಯಲ್ಲಿ ಸುಟ್ಟುಕರಕಲಾದ ಘಟನೆ ಇಂದು ಬೆಳಗ್ಗೆ ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಹಟ್ಟಿ ಪಟ್ಟಣದ ಗುಂಡುರಾವ್ ಕಾಲೊನಿಯಲ್ಲಿ ನಡೆದಿದೆ. ಮಂಜುಳಾ (45) ಮೃತ ಮಹಿಳೆ ಎಂದು ಗುರುತಿಸಲಾಗಿದೆ. ಇಂದು ಬೆಳಗ್ಗೆ ಮೃತದೇಹ ಬೆಂಕಿಯಲ್ಲಿ ಸುಡುತ್ತಿರುವ ದೃಶ್ಯ ಕಂಡು ಬಂದಿದೆ.
ಮೃತ ಮಹಿಳೆ ಹಟ್ಟಿ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಘಟನೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಪ. ಒಂದೆಡೆ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳಲಾಗುತ್ತಿದ್ದು, ಮತ್ತೊಂದು ಕಡೆ ಯಾರಾದರೂ ಈಕೆಯನ್ನು ಕೊಲೆ ಮಾಡಿರಬಹುದು ಎನ್ನುವ ಆರೋಪವೂ ಸ್ಥಳೀಯರಿಂದ ಕೇಳಿ ಬಂದಿದೆ. ಘಟನಾಸ್ಥಳಕ್ಕೆ ಹಟ್ಟಿ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಾಗಿದೆ.
ಘಟನೆ ಬಗ್ಗೆ ಮಾಹಿತಿ ನೀಡಿರುವ ಹಟ್ಟಿ ಪೊಲೀಸರು, ಕಳೆದ ಎರಡ್ಮೂರು ವರ್ಷಗಳ ಹಿಂದೆ ಮಹಿಳೆಯ ಪತಿ ಮೃತಪಟ್ಟಿದ್ದಾರೆ. ಮಾನಸಿಕ ಖಿನ್ನತೆಗೆ ಒಳಗಾಗಿ ಇಂದು ಬೆಳಗ್ಗೆ ಇವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರ ಸಹೋದರ ದೂರು ನೀಡಿದ್ದಾರೆ. ದೂರಿನ ಆಧಾರ ಮೇಲೆ ಮರಣೋತ್ತರ ಪರೀಕ್ಷೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ :ಕೆಮಿಕಲ್ ಫ್ಯಾಕ್ಟರಿಯಲ್ಲಿ ಬೆಂಕಿ ಅವಘಡ: 60ಕ್ಕೂ ಹೆಚ್ಚು ಟ್ಯಾಂಕರ್ಗಳು ಬೆಂಕಿಗಾಹುತಿ
ಒಂದೇ ಕುಟುಂಬ ನಾಲ್ವರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ : ಇತ್ತೀಚೆಗೆ ಒಂದೇ ಕುಟುಂಬದ ನಾಲ್ವರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಅರಳಸುರಳಿ ಗ್ರಾಮದಲ್ಲಿ ನಡೆದಿತ್ತು. ಗ್ರಾಮದಲ್ಲಿ ಅರ್ಚಕ ವೃತ್ತಿ ಮಾಡುತ್ತಿದ್ದ ರಾಘವೇಂದ್ರ ಅವರ ಪತ್ನಿ ನಾಗರತ್ನ ಹಾಗೂ ಇಬ್ಬರು ಗಂಡು ಮಕ್ಕಳು ಮನೆಯಲ್ಲಿಯೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಅದರಲ್ಲಿ ಮೂವರು ಸ್ಥಳದಲ್ಲೇ ಸುಟ್ಟು ಕರಕಲಾಗಿ ಸಾವನ್ನಪ್ಪಿದ್ದರೆ, ಓರ್ವ ಪುತ್ರನನ್ನು ಗಂಭೀರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆತನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದನು.
ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ನಾಗರತ್ನ ಅವರ ಸಹೋದರ ತೇಜ್ ಪ್ರಕಾಶ್ ಅವರು, ಮೃತ ರಾಘವೇಂದ್ರ ಅವರ ಸಹೋದರರು ಹಾಗೂ ಅತ್ತಿಗೆ ವಿರುದ್ಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತಮ್ಮ ಅಕ್ಕ, ಭಾವ ಹಾಗೂ ಇಬ್ಬರು ಮಕ್ಕಳ ಸಾವಿಗೆ ಆಸ್ತಿ ವಿಚಾರವಾಗಿ ಅವರ ಸಹೋದರರು ಹಾಗೂ ಅತ್ತಿಗೆ ಕಾರಣ ಎಂದು ದೂರು ನೀಡಿದ್ದರು.